ಚಿಕ್ಕಮಗಳೂರು(ಕೊಪ್ಪ) : (ನ್ಯೂಸ್ ಮಲ್ನಾಡ್ ವರದಿ) ನೆನ್ನೆಯ ದಿನ ಆಡಳಿತ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಒಂದು ವರ್ಷದ ಹಿಂದೆ ಕೊಪ್ಪ ತಾಲೂಕು ಕಛೇರಿಯಲ್ಲಿ ನಾಪತ್ತೆಯಾಗಿದ್ದ ಫಾರಂ 50, 53 ಕಡತ ಸಂಬಂಧ ಆಗಿನ ಕೇಸ್ ವರ್ಕರ್ ಆಗಿದ್ದ ವ್ಯಕ್ತಿಯ ವಿರುದ್ಧ ಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಉಪ ವಿಭಾಗಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್ ಅವರು ಪೂರ್ತಿ ಉತ್ತರ ನೀಡದೆ ಮೌನವಹಿಸಿದ್ದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಕೊಪ್ಪ ತಾಲೂಕು ಕಛೇರಿಯಲ್ಲಿ ನಾಪತ್ತೆಯಾಗಿದ್ದ ಸುಮಾರು 306 ಕಡತಗಳು ಇನ್ನೂ ಪತ್ತೆಯಾಗಿಲ್ಲ ಎಂದರೆ ಅಷ್ಟು ಕಡತಗಳು ಎಲ್ಲಿ ಹೋದವು ? ಕಾಣೆಯಾದವುಗಳನ್ನು ಅವನೇನು ತಿಂದು ಹಾಕಿದನೇ, ತಿನ್ನಲು ಅವನೇನು ಬುದ್ಧಿ ಇಲ್ಲದ ಹೆಗ್ಗಣವೇ ? ಎಲ್ಲಾ ಗೊತ್ತಿದ್ದರೂ ಆತನ ಮೇಲೆ ಕ್ರಮವೇಕೆ ಕೈಗೊಳ್ಳುತ್ತಿಲ್ಲ? ಎಂಬ ಹಲವಾರು ಪ್ರಶ್ನೆಗಳನ್ನು ಕೊಪ್ಪ ಭಾಗದ ಜನರು ಕೇಳುತ್ತಿದ್ದಾರೆ.

ಕಡತ ನಾಪತ್ತೆ ಪ್ರಕರಣದ ಕೇಸ್ ವರ್ಕರ್ ಪ್ರಕಾಶ ಆನಂತರ ಶೃಂಗೇರಿ ತಾಲೂಕು ಕಛೇರಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾನೆ, ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂಬಂತೆ ಈತ ಶೃಂಗೇರಿ ತಾಲೂಕು ಕಛೇರಿಯಲ್ಲಿ ಮಾಡುತ್ತಿರುವುದು ಸಹ ಅಂತಹ ವ್ಯವಹಾರವೇ. ಯಾರಾದರೂ ಮಾಹಿತಿ ಹಕ್ಕಿನಲ್ಲಿ ಈತನ ಜಾತಕ ಹೊರಬರಬಹುದಾದ ಪ್ರಶ್ನೆ ಕೇಳಿದರೆ ಸಾಕು ತಾನೇ ಬುದ್ದಿವಂತ ಎಂಬಂತೆ ಈಗಾಗಲೇ ಟೈಪ್ ಮಾಡಿ ಇಟ್ಟುಕೊಂಡಿರುವ "ನೀವು ಕೇಳಿರುವ ಪ್ರಶ್ನೆಯೇ ಸರಿಯಿಲ್ಲ".ಎಂಬ ಹಿಂಬರಹ ಕೊಡುತ್ತಾನೆ, ಯಾಕಯ್ಯಾ ಹೀಗೆ ಎಂದು ಕೇಳಿದರೆ ನಾನು ಇಷ್ಟೇ ಕೊಡೋದು ಬೇಕಾದರೆ ಮೇಲ್ಮನವಿ ಹಾಕಿಕೋ ಎಂದು ಪೊಗರಿನ ಮಾತಾಡುತ್ತಾನೆ. ಈ ಮಾತಿನಲ್ಲಿ ಮೇಲ್ಮನವಿಗೆ ಸಂಬಂಧ ಪಟ್ಟ ಅಧಿಕಾರಿಗಳು ಸಹ ಇವನ ಅಡಿಯಾಳುಗಳೇ, ಅಥವಾ ಯಾವ ಆಫೀಸರ್ ಗಳಿಂದ ನನ್ನನ್ನೇನು ಮಾಡಿಕೊಳ್ಳೋಕಾಗತ್ತೇ ಅನ್ನೋ ಉದ್ಧತನವೋ ಉನ್ನತ ಮಟ್ಟದ ಅಧಿಕಾರಿಗಳೇ ಹೇಳಬೇಕು.

ಇನ್ನು ಇಷ್ಟೆಲ್ಲಾ ತಲೆ ಪ್ರತಿಷ್ಠೇ ತೋರಿಸುವ ಈ ಅಧಿಕಾರಿಯ ಬಗ್ಗೆ ಯಾರೂ ಪ್ರಶ್ನೆ ಮಾಡದೇ ಇರುವುದು, ಹಳೆಯ ಕೇಸ್ ನ ತನಿಖೆಯನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯದೇ ಇರುವುದು, ಹಾಗೂ ಆರೋಪ ಮುಕ್ತವಾಗದೇ ಇದ್ದರೂ ಶೃಂಗೇರಿಗೆ ವರ್ಗಾವಣೆ ಮಾಡಿರುವುದು ಶೃಂಗೇರಿ ಕ್ಷೇತ್ರದಲ್ಲಿ ಅಥವಾ ಜಿಲ್ಲೆಯ ರಾಜಕೀಯದಲ್ಲಿ ಇರುವ ಈತನ ಗಾಡ್ ಫಾದರ್ ಯಾರು ಎಂಬ ಕುತೂಹಲ ಮೂಡುತಿದೆ.

ಸಾಮಾನ್ಯ ಸೆಟಲ್ಮೆಂಟ್ ಗಳಿಗೆಲ್ಲಾ ಈ ರಾಜಕೀಯದ ಗಾಡ್ ಫಾದರ್ ಗಳು ಇಷ್ಟೆಲ್ಲಾ ತಲೆ ಕಾಯುವ ಕೆಲಸ ಮಾಡುವುದಿಲ್ಲ, ಇವರುಗಳ ನಡುವಿನ ಅಂತಹ ಹೊಂದಾಣಿಕೆಯ ವ್ಯವಹಾರ ಯಾವುದು ಎಂಬುದು ತಿಳಿದಿಲ್ಲ.

"ಇನ್ನೂ ಮಲೆನಾಡಿನಲ್ಲಿ ಯಾರೆಲ್ಲಾ ಇಂತಹ ಅಧಿಕಾರಿಗಳಿದ್ದಾರೆ, ಶುಗರ್ ಡ್ಯಾಡಿ ಸಂಸ್ಕೃತಿ ಮಲೆನಾಡಿಗೂ ಬಂದಿದೆಯಾ ? ಕಾದುನೋಡೋಣ."