ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಟಿಪ್ಪರ್ ವಾಹನದ ಅಡಿಗೆ ಸಿಲುಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಚಿಕ್ಕಮಗಳೂರು ಪಟ್ಟಣದ ಎನ್ ಎಂ ಸಿ ವೃತ್ತದ ಸಮೀಪ ವೇಗವಾಗಿ ಆಗಮಿಸಿದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಲ್ಲೇ ಚಲಿಸುತ್ತಿದ್ದ ಪಿಕಪ್ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅತೀ ವೇಗದಿಂದ ಟಿಪ್ಪರ್ ಇದ್ದ ಕಾರಣ ಬೈಕ್ ಗೆ ಗುದ್ದಿದ ತಕ್ಷಣವೇ ಬೈಕ್ ಸವಾರನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಾಗೂ ಪಿಕಪ್ ಚಾಲಕನು ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರನು ಸ್ಥಳದಲ್ಲೇ ಮೃತಪಟ್ಟಿದ್ದು ಆತನ ಗುರುತು ಪತ್ತೆಯಾಗಿಲ್ಲ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು ಅಪಘಾತಕ್ಕೀಡಾದ ವಾಹನಗಳನ್ನು ವಶ ಪಡೆದಿದ್ದಾರೆ.
ಅಪಘಾತವನ್ನು ಮಾಡಿದ ಟಿಪ್ಪರ್ ವಾಹನವು ಶಾಸಕ ಸಿ.ಟಿ ರವಿ ಅವರ ಭಾಮೈದ ಸುದರ್ಶನ್ ಅವರದ್ದು ಎಂದು ತಿಳಿದುಬಂದಿದೆ. ಹಗಲಿನ ಸಮಯದಲ್ಲಿ ಟಿಪ್ಪರ್ ವಾಹನಕ್ಕೆ ನಗರ ಪ್ರವೇಶ ಮಾಡಲು ಅನುಮತಿ ಇಲ್ಲದಿದ್ದರೂ ಕೂಡ ಯಾವುದೇ ಕಾನೂನನ್ನು ಪಾಲಿಸದೆ ಚಾಲಕ ನಗರದ ಒಳಭಾಗಕ್ಕೆ ವಾಹನ ತಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಮಧ್ಯ ಭಾಗದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಉಳಿದ ವಾಹನ ಚಾಲಕರನ್ನು, ಪಾದಚಾರಿಗಳನ್ನು ಹಾಗೂ ವಾಹನ ಸವಾರರನ್ನು ಆತಂಕಕ್ಕೀಡುಮಾಡಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

0 Comments