ಹಾಸನ : ( ನ್ಯೂಸ್ ಮಲ್ನಾಡ್ ವರದಿ) ಮಗಳು ಮಾನಸಿಕ ಕಿರುಕುಳಕ್ಕೆ ಒಳಗಾಗಿ ತೀರಿ ಹೋದ ಕಾರಣಕ್ಕೆ ತಂದೆಯೂ ಆಕೆಯ ಪತಿಯ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ಅತಿಯಾಗಿ ಪ್ರೀತಿಸುತ್ತಿದ್ದ ಮಗಳನ್ನು ಕಳೆದುಕೊಂಡ ತಂದೆಯು ದುಃಖಿತನಾಗಿ ಮಗಳ ಸಾವಿನಿಂದ ಮನನೊಂದು ಅಳಿಯನ ಮನೆಯ ಮುಂದೆ ಮಗಳಿಗೆ ಇಷ್ಟವಾದ ಪ್ರತಿಯೊಂದನ್ನು ಹೊಸಿಲಿಗೆ ಹೆಡೆಯ ರೂಪದಲ್ಲಿ ಇಟ್ಟು ತಾನು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಾಗರಾಜ್ ಎಂದು ಗುರುತಿಸಲಾಗಿದೆ. ಈ ಹಿಂದೆ ಪ್ರವೀಣ ಎಂಬಾತನಿಗೆ ತನ್ನ ಪುತ್ರಿಯನ್ನು ಮಾಡಿಕೊಟ್ಟಿದ್ದ ನಾಗರಾಜ್ ಅವರು ಮಗಳ ಸಾವಿಗೆ ಅಳಿಯ ಹಾಗೂ ಆಕೆಯ ತಾಯಿ ಕಾರಣ ಎಂದು ಸೆಲ್ಫಿ ವಿಡಿಯೋ ಒಂದನ್ನು ಮಾಡಿ ಆ ಮೂಲಕ ತಿಳಿಸಿದ್ದಾರೆ. ನಾಗರಾಜ್ ಅವರ ಮಗಳು ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಗೆ ಗರ್ಭಪಾತ ಮಾಡುವಂತೆ ಮನೆಯವರು ತೀವ್ರ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪದ ಆಕೆಯು ಮಾನಸಿಕವಾಗಿ ಧೈರ್ಯ ಕಳೆದುಕೊಂಡಿದ್ದು ಖಿನ್ನತೆಗೊಳಗಾಗಿ ಹೆರಿಗೆಯ ಸಮಯದಲ್ಲಿ ಮೃತಪಟ್ಟಿದ್ದಳು ಆಕೆಯ ಸಾವಿಗೆ ಅವಳ ಗಂಡ ಪ್ರವೀಣ ಹಾಗೂ ಅತ್ತೆಯೆ ಕಾರಣ ಎಂದು ನಾಗರಾಜ್ ಅವರು ದೂರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಗಳ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸಾಯುವ ಮುನ್ನ ಮೃತ ನಾಗರಾಜ್ ಅವರು ವಿಡಿಯೋ ಮೂಲಕ ಅಧಿಕಾರಿಗಳನ್ನು ಕೋರಿದ್ದರು. ಘಟನೆಯು ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಈ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

0 Comments