ಕೊಪ್ಪ :(ನ್ಯೂಸ್ ಮಲ್ನಾಡ್ ವರದಿ) ಗೃಹ ಸಚಿವ ಆರಗಜ್ಞಾನೇಂದ್ರ ಅವರು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಸಾರ್ವಜನಿಕವಾಗಿ ಪೊಲೀಸರನ್ನು ನಿಂದಿಸಿರುವುದು ಸರಿಯಲ್ಲ ಗೃಹಸಚಿವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರೈತಸಂಘ ಹಾಗೂ ಹಸಿರುಸೇನೆ ಪೊಲೀಸರಿಗೆ ಮನವಿ ಸಲ್ಲಿಸಿದೆ.
ತೀರ್ಥಹಳ್ಳಿಯಲ್ಲಿ ಇತ್ತೀಚೆಗಷ್ಟೆ ನಡೆದ ಗೋ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಈ ಹಿಂದೆ ಪೊಲೀಸರು ವಿಫಲರಾಗಿದ್ದರು. ಸಾರ್ವಜನಿಕ ವಲಯದಲ್ಲಿ ಇಲಾಖೆಯ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿತ್ತು.
ಈ ಹಿನ್ನೆಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಯೋಗ್ಯತೆ ಇಲ್ದಿದ್ರೆ ಪೊಲೀಸ್ ಯೂನಿಫಾರಂ ಬಿಚ್ಚಿಟ್ಟು ಸಾಯಿರಿ, ಲಂಚ ತಿನ್ಕೊಂಡು ಸಾಯ್ರಿ, ಎಂಜಲು ಕಾಸು ತಿಂದು ಸಾಯ್ರೀ ಎಂದು ಬೈಯ್ಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಪೊಲೀಸರನ್ನು ಸಾರ್ವಜನಿಕವಾಗಿ ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆ ಇಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ರೈತ ಸಂಘ ಹಾಗೂ ಹಸಿರು ಸೇನೆ, ಸಚಿವರ ವಿರುದ್ದ ಕ್ರಮಕ್ಕಾಗಿ ಆಗ್ರಹಿಸಿದೆ. ಹಗಲಿರುಳು ಸರ್ವರ ಹಿತಕ್ಕಾಗಿ ಸೇವೆಯನ್ನು ಮಾಡುವ ಪೊಲೀಸರ ಕುರಿತಾಗಿ ಸಚಿವರು ಮಾತನಾಡಿರುವುದು ಸರಿಯಲ್ಲ ಅವರ ಮೇಲೆ ಶಿಸ್ತು ಕ್ರಮಗಳನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಬರ್ಕತ್ ಆಲಿ, ರಶೀದ್, ಇವನ್ ಜೋಯೆಲ್, ಸತೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

0 Comments