ಹಾಸನ : (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಾದ್ಯಂತ ದತ್ತಮಾಲಾ ಅಭಿಯಾನ ಹಾಗೂ ದತ್ತ ಜಯಂತಿಯ ಅಂಗವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶೋಭಾಯಾತ್ರೆ ಧಾರ್ಮಿಕ ಸಭೆ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆ ಯಾವುದೇ ರೀತಿಯ ಅಹಿತಕರ ಘಟನೆಗಳು ಉಂಟಾಗದಂತೆ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಈ ಮಧ್ಯೆ ದತ್ತಮಾಲಾಧಾರಿಗಳು ಚಿಕ್ಕಮಗಳೂರಿನಲ್ಲಿರುವ ದತ್ತಾತ್ರೇಯ ಪೀಠಕ್ಕೆ ತೆರಳಿ ಪಾದುಕೆಗಳ ದರ್ಶನವನ್ನು ಪಡೆದು ಆ ಸ್ಥಳದಿಂದ ಮರಳಿ ಬರುವಾಗ ಮಾರ್ಗಮಧ್ಯೆ ಮದ್ಯಪಾನ ಮಾಡಿ ಅನ್ಯಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ವರ್ತನೆ ತೋರುತ್ತಾರೆ, ಅನ್ಯಧರ್ಮೀಯರ ಭಾವನೆಗಳಿಗೆ ಗೌರವ ಕೊಡದೆ ಘೋಷಣೆಗಳನ್ನು ಕೂಗುತ್ತಾರೆ ಎಂದು ಆರೋಪಿಸಿ ಬೇಲೂರು ತಾಲೂಕಿನಾದ್ಯಂತ ದತ್ತ ಜಯಂತಿಯ ದಿನವಾದ ಡಿಸೆಂಬರ್ 19 ರ ಭಾನುವಾರದಂದು ಮದ್ಯಪಾನಕ್ಕೆ ನಿಷೇಧ ಹೇರಲಾಗಿದೆ ಎಂದು ಹಾಸನ ಜಿಲ್ಲಾಡಳಿತ ತಿಳಿಸಿದೆ. ಆದರೆ ಮದ್ಯ ನಿಷೇಧಕ್ಕೆ ಜಿಲ್ಲಾಧಿಕಾರಿ ಉಲ್ಲೇಖಿಸಿರುವ ಕಾರಣಗಳ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಆರ್.ಗಿರೀಶ್ ಪೊಲೀಸ್ ಅಧೀಕ್ಷಕರ ಪ್ರಸ್ತಾವನೆಯ ಮೇರೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ಹಾಗೂ ಕಾನೂನು ಭಂಗವಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಹಾಗೂ ಅನ್ಯಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವ ಸಲುವಾಗಿ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸುವ ದಿನವಾದ ಡಿಸೆಂಬರ್ 19ರ ಭಾನುವಾರದಂದು ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಆದೇಶಿಸಿದ್ದಾರೆ ಹಾಗೂ ಕಾನೂನು ಪರಿಪಾಲನೆ ಮಾಡದವರಿಗೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಬೇಲೂರು ತಾಲ್ಲೂಕಿನ ಅತ್ಯಂತ ಎಲ್ಲಾ ಬಗೆಯ ಮಧ್ಯ ಹಾಗೂ ಅಮಲು ಬರಿಸುವ ಪಾನೀಯಗಳ ಶೇಖರಣೆಯನ್ನು ಸರ್ಕಾರಿ ಹಾಗೂ ಖಾಸಗಿ ಮದ್ಯದ ಅಂಗಡಿಗಳಲ್ಲಿ, ಡಾಬಾಗಳಲ್ಲಿ ಬಾರುಗಳಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಒಂದುವೇಳೆ ಈ ರೀತಿಯ ವಿಷಯಗಳು ಗಮನಕ್ಕೆ ಬಂದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.

ಈ ಆದೇಶ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಅಸಂಬದ್ಧ ಕಾರಣ ನೀಡಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿವೆ.