ಬಾಳೆಹೊನ್ನೂರು :(ನ್ಯೂಸ್ ಮಲ್ನಾಡ್ ವರದಿ) ತುಂಬು ಗರ್ಭಿಣಿಯೋರ್ವರೂ ಹೆರಿಗೆಗಾಗಿ ಆಸ್ಪತ್ರೆಗೆ ಹೋದಾಗ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗು ಹಾಗೂ ತಾಯಿಯು ಇಬ್ಬರೂ ಪ್ರಾಣ ಕಳೆದುಕೊಂಡ ಮನ ಕಲುಕುವ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾಕ್ಟರ್ ಎಲ್ಡೋಸ್ ವರ್ಗೀಸ್ ಅವರ ಬೇಜವಾಬ್ದಾರಿಯಿಂದ ಎರಡು ಜೀವಗಳು ಹೋಗಿದೆಯೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆರೋಪಿಸಿ ಆಸ್ಪತ್ರೆಯ ಮುಂದೆಯೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತ ಹೊಂದಿದ ಮಹಿಳೆಯನ್ನು ಬಾಳೆಹೊನ್ನೂರಿನ ನಿವಾಸಿ ಶ್ವೇತಾ (27) ಎಂದು ಗುರುತಿಸಲಾಗಿದೆ. ಈ ಕೂಡಲೇ ನಿರ್ಲಕ್ಷ್ಯ ತೋರಿದ ವೈದ್ಯ ಎಲ್ಡೋಸ್ ಅವರನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದಾರೆ.
ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಹೆಣ್ಣುಮಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಅವಳಿಗೆ ಅಗತ್ಯವಾದ ಸಮಯದಲ್ಲಿ ವೈದ್ಯರು ನೆರವಾಗದೆ ತಾಯಿ ಹಾಗೂ ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಹಿಂದೆಯೂ ಕೂಡ ನರಸಿಂಹರಾಜಪುರದ ಆಸ್ಪತ್ರೆಯಲ್ಲಿ ಈ ರೀತಿಯ ಇನ್ನೊಂದು ಘಟನೆಗೆ ವೈದ್ಯ ಎಲ್ಡೋಸ್ ವರ್ಗೀಸ್ ಅವರು ಸಿಲುಕಿದ ಕಾರಣ ಸಸ್ಪೆಂಡ್ ಮಾಡಲಾಗಿತ್ತು ಹಾಗೂ ನಂತರದಲ್ಲಿ ಅವರು ಬಾಳೆಹೊನ್ನೂರಿನ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ವೈದ್ಯರ ಮೇಲೆ ಸಾರ್ವಜನಿಕರು ತೀವ್ರವಾಗಿ ಆರೋಪ ಮಾಡುತ್ತಿದ್ದು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ, ಪೊಲೀಸರು ಈ ಕೂಡಲೇ ವೈದ್ಯರನ್ನು ಬಂಧಿಸಿ ಅವರ ನಿರ್ಲಕ್ಷತನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

0 Comments