ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಶಾಸಕ ಸಿಟಿ ರವಿ ಅವರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರು ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಧರ್ಮ ಹಾಗೂ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವುದು ಸಿಟಿ ರವಿಯವರ ಕೆಲಸವಾಗಿದೆ. ಬಿಜೆಪಿ ಕೇವಲ ಪಕ್ಷವಲ್ಲ ಬೆಂಕಿ ಹಚ್ಚುವ ಪಕ್ಷ ಎಂದು ಟೀಕಿಸಿದ್ದಾರೆ. ಶಾಸಕ ಸಿಟಿ ರವಿ ಅವರನ್ನು ಲೂಟಿ ರವಿ ಎಂದು ಈ ಹಿಂದೆ ಡಿ.ಕೆ ಶಿವಕುಮಾರ್ ಅವರು ಹೇಳಿದ್ದರು ಆದರೆ ಅವರು ವಿಕೃತ ಮನಸ್ಸುಳ್ಳ ಮನುಷ್ಯನೂ ಹೌದು ಎಂದು ಸಿ.ಟಿ ರವಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಯಾದರೂ ಕೂಡ ಅಭಿವೃದ್ಧಿ ವಿಚಾರದಲ್ಲಿ ಅಷ್ಟಕ್ಕಷ್ಟೇ ಎಂದು ಧ್ರುವನಾರಾಯಣ್ ಟೀಕಿಸಿದರು. ಈ ಹಿಂದೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ 4 ತಿಂಗಳ ಒಳಗೆ 43 ಕೇಸ್ ವಾಪಸ್ ಪಡೆದಿದ್ದರು ಆ 43 ಪ್ರಕರಣಗಳಲ್ಲಿ ಮೊದಲನೇ ಪ್ರಕರಣವೇ ಶಾಸಕ ಸಿ.ಟಿ ರವಿಯದ್ದು ಎಂದರು.

ಕಾಂಗ್ರೆಸ್ ಪಕ್ಷದ ಕುರಿತಾಗಿ ಹಿಂದೆ ಬೆಂಕಿ ಹಚ್ಚುವ ಪಕ್ಷ ಕಾಂಗ್ರೆಸ್ ಎಂಬ ಹೇಳಿಕೆಯನ್ನು ನೀಡಿದ್ದಾರೆ, ಕಾಂಗ್ರೆಸ್ನ ಕುರಿತಾಗಿ ಮಾತನಾಡುವ ನೈತಿಕತೆಯೇ ಬಿಜೆಪಿಗರಿಗೆ ಇಲ್ಲ ಸುಖಾಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಬೇಕೆಂದರು.

ಕೇಂದ್ರ ಸಚಿವ ಅಮಿತ್ ಷಾ ಜೈಲಿನಲ್ಲಿದ್ದವರು, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೆಲ ಸಚಿವರು ಜೈಲು ಸೇರಿದ್ದರು, ಮೊದಲು ಈ ಕುರಿತಾಗಿ ಗಮನಹರಿಸದೆ ಕೊಳೆತು ನಾರುತ್ತಿರುವ ತಮ್ಮ ಮನೆಯನ್ನೇ ಸರಿಪಡಿಸದೆ ಕಾಂಗ್ರೆಸ್ ನಾಯಕರ ಕುರಿತಾಗಿ ಮಾತನಾಡುವ ಯಾವುದೇ ನೈತಿಕತೆ ನಿಮಗಿಲ್ಲ ಎಂದು ವಾಗ್ದಾಳಿ ನಡೆಸಿದರು.