ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಪಟ್ಟಣ ಪಂಚಾಯತ್ ನಲ್ಲಿ ನಡೆದ ನಗರೋತ್ಥಾನ ಯೋಜನೆಯ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಟಿ.ಡಿ ರಾಜೇಗೌಡ ಅವರು ಭಾಗವಹಿಸಿ ಹಲವು ನಿರ್ಣಯಗಳನ್ನು ಕೈಗೊಂಡರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿರುವ ಪಟ್ಟಣ ಪಂಚಾಯತ್ ನಲ್ಲಿ ನಡೆದ ಈ ಸಭೆಯಲ್ಲಿ ಶಾಸಕ ಟಿಡಿ ರಾಜೇಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ ಹಾಗೂ ವಿರೂಪಾಕ್ಷ ಪೂಜಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. 

ಈ ಹಿಂದೆ ಅಮೃತ್ ನೈರ್ಮಲ್ಯ ನಗರ ಯೋಜನೆ ಅಡಿಯಲ್ಲಿ ಬಿಡುಗಡೆ ಆಗಿದ್ದ ಒಂದು ಕೋಟಿ ಹಣವು ಕೆಲ ಕಾರಣಗಳಿಂದಾಗಿ ಮೂಡಿಗೆರೆ ಪಟ್ಟಣ ಪಂಚಾಯತ್ ಗೆ ವರ್ಗಾವಣೆ ಆಗಿದೆ, ಶೀಘ್ರವಾಗಿ ಶೃಂಗೇರಿಗೂ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದರು. ಈ ಸಭೆಯಲ್ಲಿ ನಿರ್ಣಯಿಸಿದ ಯೋಜನೆಗಳು ಇಂತಿವೆ. 

ಪಟ್ಟಣದ ವಾರ್ಡ್ ನಂಬರ್ 7 ಹರಿಹರ ಬೀದಿ ಮುಂಭಾಗದ ರಸ್ತೆಯ ಅಕ್ಕ ಪಕ್ಕದಲ್ಲಿ ಇಂಟರ್ ಲಾಕ್ ಅಳವಡಿಕೆ ಹಾಗೂ ಬಾಕ್ಸ್ ಡ್ರೈನೇಜ್ ನಿರ್ಮಾಣ. ವಾರ್ಡ್ ನಂಬರ್ 07 ಹರಿಹರ ಬೀದಿಯಲ್ಲಿರುವ ಕೆಲ್ಲಾರ್ ಸೂಪರ್ ಬಜಾರ್ ಹಿಂಭಾಗದಲ್ಲಿ ಕಾಂಕ್ರೀಟ್ ವಾಲ್ ನಿರ್ಮಾಣಕ್ಕಾಗಿ 9 ಲಕ್ಷದ 54 ಸಾವಿರ ರೂಪಾಯಿ ಮುಂತಾದ ಕಾರ್ಯಗಳ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಂಡರು.

ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಶೃಂಗೇರಿ ನಗರಕ್ಕೆ ನೀರು ಸರಬರಾಜಾಗುತ್ತಿರುವ ಪಂಪ್ ಹೌಸ್ ಬಹಳಷ್ಟು ತಗ್ಗು ಪ್ರದೇದಲ್ಲಿರುವ ಕಾರಣ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಸ್ಥಳಾಂತರಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಶಾಸಕರು ಪ್ರಸ್ತಾವನೆ ಸಲ್ಲಿಸಿದರು. 

ಶೃಂಗೇರಿಯ ಸಂತೆ ಮಾರುಕಟ್ಟೆ ಸಮೀಪವಿರುವ ಸಮುದಾಯ ಭವನವನ್ನು ಅಭಿವೃದ್ದಿಪಡಿಸಿ ಆದಾಯ ಹೆಚ್ಚಿಸುವ ಸಲುವಾಗಿ ಚರ್ಚೆ ನಡೆಯಿತು ಹಾಗೂ ಮುಂಬರುವ ದಿನಗಳಲ್ಲಿ ಪಟ್ಟಣವನ್ನು ವಿಸ್ತರಿಸಬೇಕು ಎಂಬುದಾಗಿಯೂ ಚರ್ಚೆ ನಡೆಯಿತು.

ಶಾಸಕ ಹಾಗೂ ಅಧ್ಯಕ್ಷರ ನಡುವೆ ವಾಕ್ಸಮರ : 

ಶೃಂಗೇರಿ ಕ್ಷೇತ್ರಕ್ಕೆ ಅನುದಾನ ತರುವ ಸಲುವಾಗಿ ಶಾಸಕರು ಹೆಚ್ಚಿನ ಗಮನ ನೀಡಬೇಕು, ಪಕ್ಷಗಳಿಗೆ ಓರ್ವರಂತೆ ಇಲ್ಲಿ ಶಾಸಕರಿಲ್ಲ ಎಲ್ಲದಕ್ಕೂ ಮಾಜಿ ಶಾಸಕರು ಅಡ್ಡಿ ಮಾಡುತ್ತಾರೆ ಎನ್ನುವುದು ಸೂಕ್ತವಲ್ಲ ಎಂದು ಶೃಂಗೇರಿ ಪಟ್ಟಣ ಪಂಚಾಯತ್ ಅಧ್ಯಕ್ಷ ಹರೀಶ್ ವಿ ಶೆಟ್ಟಿ ಶಾಸಕರಿಗೆ ಹೇಳಿದರು ಈ ಕುರಿತಾಗಿ ಪ್ರತಿಕ್ರಯಿಸಿದ ಶಾಸಕ ರಾಜೇಗೌಡ ಅನಗತ್ಯ ಚರ್ಚೆ ಬೇಡ ಅಭಿವೃದ್ದಿ ಕಾರ್ಯದ ಕುರಿತಾಗಿ ಚರ್ಚೆ ನಡೆಸೋಣ ಎಂದರು.

https://chat.whatsapp.com/I2r7uKjzrF9AlSwMn2xClg

ಸರ್ವಪಕ್ಷ ಹೋರಾಟಕ್ಕೆ ಕರೆ ನೀಡಿದ ಶಾಸಕ ಟಿ ಡಿ ರಾಜೇಗೌಡ :

ವಾರ್ಡ್ ನಂಬರ್ 10 ಗ್ರಾಮಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುವುದರಿಂದ ಅಲ್ಲಿಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತದೆ, ರಸ್ತೆಯ ಹತ್ತಿರವಿರುವ ಮನೆಗಳಿಗೆ ಇನ್ನೂ ಹಕ್ಕು ಪತ್ರ ನೀಡದೇ ಇರುವ ಕಾರಣ ಅವರುಗಳು ಪರಿಹಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಜನರಿಗೆ ಅನ್ಯಾಯವಾಗಬಾರದು ಯಾವುದೇ ಕಾರಣಕ್ಕೂ ಪರಿಹಾರ ದೊರೆಯುವ ಮುನ್ನ ಮನೆ ತೊರೆಯಲು ಬಿಡುವುದಿಲ್ಲ ಅಂತಹ ಸಂದರ್ಭಗಳು ಎದುರಾದರೆ ಸ್ವತಃ ನಾನೂ ಬಂದು ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.