ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶಾಲಾ ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ವೃದ್ಧಿಸುವ ಸಲುವಾಗಿ ಹಾಗೂ ಕಾನೂನಿನ ಅರಿವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿಸುವ ಸಲುವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯುವ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು. ಅಪರಾಧ ನಡೆಯುವ ಮುನ್ನವೇ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಅಪರಾಧ ತಡೆ ಮಾಸಾಚರಣೆಯ ಉದ್ದೇಶವಾಗಿದೆ ಎಂದರು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕಾರ ಅತಿ ಮುಖ್ಯವಾಗಿದೆ ಎಂದು ಹೇಳಿದರು. ದೈವ ಮತ್ತು ದೇವರ ಪೂಜೆ ಅಂತ ವಂಚಿಸುವ ತಂಡಗಳ ಬಗ್ಗೆ ಮತ್ತು ಕಡಿಮೆ ದರದಲ್ಲಿ ಮನೆಯ ಸಮಾನು ಸರಬರಾಜು ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಹಬ್ಬ ಹರಿದಿನ ಮತ್ತು ಸಮಾರಂಭಗಳಿಗೆ ತೆರಳುವ ವೇಳೆ ಮಹಿಳೆಯರು ತಮ್ಮ ಆಭರಣಗಳನ್ನು ಪ್ರದರ್ಶನ ಮಾಡಬಾರದು, ಶಾಲೆಗೆ ತೆರಳುವ ಮಕ್ಕಳ ಬಗ್ಗೆ ಪೋಷಕರು ತಿಂಗಳಿಗೊಮ್ಮೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಶೃಂಗೇರಿ ಪೊಲೀಸ್ ಠಾಣಾ ಸಿಬ್ಬಂದಿ  ಪ್ರದೀಪ್ ಕುಮಾರ್ ನಾಯ್ಕ್ ಸೂಚನೆ ನೀಡಿದರು.

ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಗ್ರಾಮದಲ್ಲಿ ಸಾರ್ವಜನಿಕ ಸಭೆ ಮತ್ತು ಶಾಲೆಯಲ್ಲಿ ಸಭೆ ನಡೆಸಿ ಅಪರಾಧ ತಡೆಯುವ ಬಗ್ಗೆ ಕಾರ್ಯಕ್ರಮ ನಡೆಸಲಾಗಿದೆ. ವಿದ್ಯಾರ್ಥಿಗಳಿಂದ ರಸ್ತೆಯಲ್ಲಿ ಜಾಥಾ ಹಮ್ಮಿಕೊಂಡು ಬ್ಯಾನರ್ ಗಳ ಮೂಲಕ ಪೊಲೀಸರು ಅರಿವು ಮೂಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳಿಂದ ದರೋಡೆ ಮತ್ತು ಸುಲಿಗೆ ಕಳವು ಯತ್ನಗಳು ಕಂಡು ಬಂದರೆ ತಕ್ಷಣ 112 ಗೆ ಕರೆ ಮಾಡಲು ತಿಳಿಸಿದರು ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ : 8265250150 ಪೊಲೀಸ್ ನಿರೀಕ್ಷಕರು : 9480805156 ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಬೇಕು ಎಂದರು. ಅಪರಾಧ ತಡೆಗಟ್ಟಲು ಮತ್ತು ಪತ್ತೆ ಮಾಡಲು ಸಹಕರಿಸಬೇಕೆಂದು ASI ಪದ್ಮಾಕ್ಷ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ASI ಪದ್ಮಾಕ್ಷ್,ಸಿಬ್ಬಂದಿಗಳಾದ ಪ್ರದೀಪ್ ಕುಮಾರ್ ನಾಯ್ಕ್, ರಾಜಶೇಖರ, ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.