ಕಡೂರು : (ನ್ಯೂಸ್ ಮಲ್ನಾಡ್ ವರದಿ) ಯುವಕನೋರ್ವನಿಗೆ ಮದುವೆ ಮಾಡಿಸುವ ಸಲುವಾಗಿ ಯುವತಿಯನ್ನು ಯುವಕನ ಸ್ನೇಹಿತರು ಅಪಹರಿಸಿದ ಘಟನೆ ಕಡೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರಡಿಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು ಯುವತಿಯನ್ನು ಅಪಹರಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಲು ಬಂದ ಮೂವರು ಕಿಡಿಗೇಡಿಗಳು ಬೊಲೆರೋ ವಾಹನದಲ್ಲಿ ಬಂದು ಆಕೆಯ ಪೋಷಕರನ್ನು ಥಳಿಸಿ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ. ಈ ಘಟನೆಯನ್ನು ನೋಡಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ ತಕ್ಷಣ ಯುವತಿಯ ರಕ್ಷಣೆಯ ಕುರಿತಾಗಿ ಗಮನಹರಿಸಿದ ಪೊಲೀಸರು ಅಲ್ಲೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಬಂಧಿತರನ್ನು ಮಲ್ಲೇಶ್, ಪರಮೇಶ್,  ಮಹಾಂತೇಶ್ ಎಂದು ಗುರುತಿಸಲಾಗಿದೆ.  ಪರಮೇಶ್ ಈ ಹಿಂದೆಯೇ ಯುವತಿಯನ್ನು ಮದುವೆಯಾಗಬೇಕು ಎಂದು ನಿಶ್ಚಯಿಸಿದ್ದ ಆದರೆ ಆತನ ವರ್ತನೆಯನ್ನು ಒಪ್ಪದ ಪೋಷಕರು ಅವನಿಗೆ ಮದುವೆ ಮಾಡಿ ಕೊಡಲು ಒಪ್ಪಿರಲಿಲ್ಲ ಈ ಕಾರಣಕ್ಕೆ ಆಕೆಯನ್ನು ಮದುವೆಯಾಗಿ ಆರು ತಿಂಗಳ ಬಳಿಕ ಊರಿಗೆ ಬಂದರೆ ಎಲ್ಲವೂ ಸರಿ ಹೋಗುತ್ತದೆ ಎಂಬ ಮನಸ್ಥಿತಿಯಲ್ಲಿ ಪರಮೇಶ್ ತನ್ನ ಸ್ನೇಹಿತರ ಜೊತೆಗೆ ಯುವತಿಯನ್ನು ಕಿಡ್ನಾಪ್ ಮಾಡಿದ್ದಾನೆ. 

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ : ಕೊಪ್ಪ ಬಜರಂಗದಳದ ಮುಖಂಡನ ವಿರುದ್ದ ಕ್ರೈಸ್ತ ಸಂಘಟನೆಗಳಿಂದ ದೂರು

ತಕ್ಷಣವೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ ಹಿನ್ನೆಲೆ ತಾಳಿ ಕಟ್ಟಬೇಕಿದ್ದ ಯುವಕನ ಕೈಗೆ ಕೋಳ ಬಿದ್ದಿದೆ. ಘಟನೆಯ ಕುರಿತು ಕಡೂರು ಪೊಲೀಸರು ತನಿಖೆ ನಡೆಸುತ್ತಿದ್ದು ಇನ್ನಷ್ಟು ಮಾಹಿತಿಗಳು ಹೊರಬೀಳಬೇಕಿದೆ.