ಹಾಸನ : (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೋರ್ವ ತನ್ನ ಪತ್ನಿಗೆ ಬೇರೊಬ್ಬ ವ್ಯಕ್ತಿ ಮೊಬೈಲ್ ಫೋನಿನಿಂದ ಕರೆ ಮಾಡಿದ ಕಾರಣಕ್ಕಾಗಿ ಆತನ ಜೀವವನ್ನೇ ತೆಗೆದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರಿನಲ್ಲಿ ಈ ಕೊಲೆ ಸಂಭವಿಸಿದೆ. ಅಕ್ಕನ ಮನೆಯಿಂದ ತಿಂಡಿ ತಿಂದು ಖುಷಿಯಿಂದ ಹೊರ ಹೋಗಿದ್ದ ವ್ಯಕ್ತಿ ಮರಳಿ ಮನೆಗೆ ಹಿಂದಿರುಗಿ ಬಂದದ್ದು ಹೆಣವಾಗಿ. ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಕುಪ್ಪೆ ಮುದ್ದನಹಳ್ಳಿ ಗ್ರಾಮದ ನಿವಾಸಿ ರವಿ ಎಂಬ ವ್ಯಕ್ತಿಯನ್ನು ನಾಲ್ಕು ಜನರು ಸೇರಿ ಹಲ್ಲೆಗೈದು ಕೊಲೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆ :
ಬೆಳಗ್ಗೆ ತಿಂಡಿ ತಿಂದು ರವಿ ಹೊರಹೋಗಿದ್ದಾನೆ. ಮಧ್ಯಾಹ್ನ ಸುಮಾರು 12.30 ರ ಸಮಯದಲ್ಲಿ ರವಿಗೆ ಯಾರೋ ಹಲ್ಲೆ ಮಾಡುತ್ತಿದ್ದಾರೆ ಎಂದು ರವಿಯ ತಾಯಿಗೆ ಯಾರೋ ತಿಳಿಸಿದ್ದಾರೆ. ಕೂಡಲೇ ರವಿಯ ತಾಯಿಯು ರವಿಯ ಅಕ್ಕನಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ರವಿಯ ಮೊಬೈಲ್ ಫೋನ್ ಗೆ ಕರೆ ಮಾಡಿದ ರವಿಯ ಅಕ್ಕನಿಗೆ ಬಳೆಮಂಜ ಎಂಬ ವ್ಯಕ್ತಿಯು ಉತ್ತರಿಸಿ ನಾವು ನಾಲ್ವರಿದ್ದೇವೆ ರವಿಯೊಂದಿಗೆ ನಿಮ್ಮ ಮನೆಗೆ ಬರುತ್ತೇವೆ ಎಂದಿದ್ದಾನೆ.
ಇದಾದ ಕೆಲ ಸಮಯದ ನಂತರ ರವಿಯ ಮನೆಗೆ ಕೇವಲ ನಾಲ್ವರು ಮಾತ್ರ ಬಂದಿದ್ದಾರೆ. ರವಿ ಈ ಸಮಯದಲ್ಲಿ ಅಲ್ಲಿರಲಿಲ್ಲ ಆತನನ್ನು ಹೊಯ್ಸಳ ಎಂಬಾತನ ಮನೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಮನೆಗೆ ಬಂದಿದ್ದ ಆರೋಪಿಗಳು ರವಿಯ ಮೊಬೈಲ್ ಫೋನನ್ನು ತಮ್ಮೊಂದಿಗೆ ತಂದು ಬೇರೊಬ್ಬನ ಪತ್ನಿಗೆ ರವಿ ಫೋನ್ ಮಾಡುತ್ತಿದ್ದಾನೆ ಆತನ ಮೊಬೈಲ್ ನಲ್ಲಿ ಆಕೆಯ ನಂಬರ್ ಇದೆ ಎಂದೂ ಮನೆಯವರಿಗೆ ತೋರಿಸಿದ್ದಾರೆ.
ತಕ್ಷಣವೇ ಗಾಬರಿಯಿಂದ ರವಿಯನ್ನು ನೋಡಲು ಮನೆಯವರು ಹೊಯ್ಸಳನ ಮನೆಗೆ ತೆರಳಿ ವಿಚಾರಿಸಿದ್ದಾರೆ. ಆದರೆ ಅವರು ಮನೆಗೆ ತಲುಪುವ ಹೊತ್ತಿನ ವೇಳೆಗೆ ರವಿ ಶವವಾಗಿದ್ದ. ಆತನ ಬಟ್ಟೆ ಹರಿದಿತ್ತು, ಕೈಯಲ್ಲಿ ತೆರಚಿದ ಗಾಯಗಳಾಗಿತ್ತು, ಬಲವಾದ ಆಯುಧಗಳಿಂದ ರವಿಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ರವಿಯನ್ನು ಹತ್ಯೆ ಮಾಡಲಾಗಿದೆ ಎಂದು ರವಿಯ ಸಹೋದರ ದೂರು ನೀಡಿದ್ದಾರೆ. ಘಟನೆಯ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿರುವಹಳ್ಳಿ ಮೈಸೂರು ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಕುರಿತಾದ ಸತ್ಯಾ ಸತ್ಯತೆಯು ತನಿಖೆಯ ನಂತರವಷ್ಟೇ ಹೊರಬರಬೇಕಿದೆ.

0 Comments