ಮಲೆನಾಡು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ 4 ತಾಲೂಕಿನ ಸೊಸೈಟಿಗಳಿಗೆ ಸೀಮೆಎಣ್ಣೆ ಸರಬರಾಜು ನಿಂತಿರುವುದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

ಮಲೆನಾಡಿನಲ್ಲಿ ಈಗ ಕೃಷಿ ಚಟುವಟಿಕೆಗಳ ಸೀಸನ್, ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ ಸೀಮೆಎಣ್ಣೆ ಅತ್ಯವಶ್ಯಕವಾಗಿದೆ. ಆದರೆ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮತ್ತು ಮೂಡಿಗೆರೆ ತಾಲೂಕಿನಲ್ಲಿ ಸೀಮೆಎಣ್ಣೆಗೆ ಬರ ಉಂಟಾಗಿದೆ. ಇದಕ್ಕೆ ಸಾಗಣೆದಾರರಿಗೆ ಬಾಕಿ ಮೊತ್ತ ಕೇವಲ 24ಲಕ್ಷ ಹಣ ಪಾವತಿಸದೆ ಇರುವುದೇ ಕಾರಣವಾಗಿದೆ.

ಆಹಾರ ಇಲಾಖೆಯ ಅಧಿಕಾರಿಗಳು, ಸಚಿವರಿಗೆ ಅದೆಷ್ಟು ಬಾರಿ ಗಮನಕ್ಕೆ ತಂದರೂ ಉಪಯೋಗವಿಲ್ಲವಾಗಿದೆ. ಜೊತೆಗೆ ಜನರ ಕಷ್ಟದ ಅರಿವೇ ಇಲ್ಲವೆಂಬಂತೆ ರಾಜಕೀಯ ನಾಯಕರುಗಳು ಕೆಸರಿನಲ್ಲಿ ಕೋಣದಂತೆ ಮಲಗಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಕೇಂದ್ರ ಸಚಿವರು, ರಾಷ್ಟ್ರೀಯ ನಾಯಕರನ್ನು ಹೊಂದಿರುವ ಜಿಲ್ಲೆಯಲ್ಲಿ ಕನಿಷ್ಠ ಸೀಮೆಎಣ್ಣೆ ಸಿಗದೆ ಪರದಾಡುತ್ತಿದ್ದಾರೆ ಎಂದರೆ ಇದು ಜನಪ್ರತಿನಿಧಿಗಳ ಕಾರ್ಯ ವೈಖರಿ ಬಗ್ಗೆ ಪ್ರಶ್ನೆ ಮೂಡಿಸುತ್ತದೆ. 

ಇತ್ತೀಚೆಗಷ್ಟೇ ವಿಧಾನ ಪರಿಷತ್ ಚುನಾವಣೆ ನಡೆದಿದ್ದು ಅಂದಾಜು ಇಪ್ಪತ್ತು ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುವ ಮೂಲಕ ಚುನಾವಣಾ ಪೈಪೋಟಿ ನಡೆದಿತ್ತು, ಇನ್ನೊಂದೆಡೆ ಕೇವಲ 24ಲಕ್ಷ ಬಾಕಿ ಹಣಕ್ಕೆ ಸುಮಾರು 30 ಸಾವಿರಕ್ಕೂ ಅಧಿಕ ಜನಸಾಮಾನ್ಯರು, ರೈತರು ಪರಿಪಾಟಲು ಪಡುವಂತಾಗಿದೆ. ಹಾಗೆ ನೋಡಿದರೆ ಇದು ಕಳೆದ ಚುನಾವಣೆಯಲ್ಲಿ ರಾಜಕಾರಣಿಗಳು ಕೊಂಡುಕೊಂಡ ಕೇವಲ 24 ಮತಗಳ ಪೇಮೇಂಟ್ ಗೆ ಸಮ.

ಬಾಕಿ ಇರುವ ಸೀಮೆಎಣ್ಣೆ ಬಿಲ್ ಗೂ ಜನಪ್ರತಿನಿಧಿಗಳಿಗೂ ಏನು ಸಂಬಂಧ ಎನ್ನಬಹುದು. ಆದರೆ ತಮ್ಮ ಕೆಲಸಕ್ಕೆ ಅಡ್ಡಿಯಾದವರನ್ನು ಟ್ರಾನ್ಫರ್ ಮಾಡಿಸುವ, ತಮ್ಮ ಹಾಗೂ ತಮ್ಮ ಹಿಂಬಾಲಕರ ಅಕ್ರಮ ಕೆಲಸಗಳನ್ನು ಸಕ್ರಮ ಮಾಡಿಸಿಕೊಳ್ಳುವ ಇವರು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗೆಹರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ತಪ್ಪಲ್ಲವೇ.!

ಗಗನದಲ್ಲಿ ಡೀಸೆಲ್ ದರ: ಸೀಮೆಎಣ್ಣೆ ಸಿಗುತ್ತಿಲ್ಲ ಎಂದು ಅನಿವಾರ್ಯವಾಗಿ ಡೀಸೆಲ್ ಮೊರೆ ಹೋಗೋಣ ಎಂದರೆ ಡೀಸೆಲ್ ದರ ಗಗನದಲ್ಲಿದೆ, ಆದಕಾರಣ ಕೂಡಲೇ ಸೀಮೆಎಣ್ಣೆ ಸಪ್ಲೈ ಮಾಡಬೇಕು ಎನ್ನುತ್ತಾರೆ ರೈತರು, ಕೂಲಿ ಕಾರ್ಮಿಕರು.

ಇದು ಒಂದು ರೀತಿಯಲ್ಲಿ ಚುನಾವಣೆಯಲ್ಲಿ ಮತಕ್ಕಾಗಿ ಮಾರಿಕೊಳ್ಳುವ ಜನರಿಗೂ ಪಾಠ ಎನ್ನಬಹುದು.