ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ಕುಟುಂಬವೊಂದು ನಲವತ್ತು ವರ್ಷಗಳ ಬಳಿಕ ಪುನಃ ಹಿಂದೂ ಧರ್ಮಕ್ಕೆ ಮರಳಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಘರ್ ವಾಪಸಿಯ ಮೂಲಕ ಭದ್ರಾವತಿಯ ಅಂತರಗಂಗೆ ಗ್ರಾಮದಲ್ಲಿದ್ದ ಜಯಶೀಲನ್ ಎಂಬುವವರ ಕುಟುಂಬವೊಂದನ್ನು ಮರಳಿ ಹಿಂದೂ ಧರ್ಮಕ್ಕೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರು ಕರೆತಂದಿದ್ದಾರೆ.
ಮೂಲತಃ ಹಿಂದೂ ಕುಟುಂಬವಾಗಿದ್ದ ಏಳುಮಲೈ (ಕುಟುಂಬದ ಹಿರಿಯರು) ಎಂಬುವವರ ಪರಿವಾರವು1980 ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಆದರೆ ಅವರ ಕುಟುಂಬದ ಯಾವ ಸದಸ್ಯರು ಕೂಡ ಕ್ರಿಶ್ಚಿಯನ್ನರ ಧರ್ಮಾಚರಣೆ ಮಾಡದೇ ಚರ್ಚ್ ಗೆ ತೆರಳದೆ ಹಿಂದೂ ಧರ್ಮದ ಅನುಸಾರ ಆಚರಣೆಗಳನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ವಿಚಾರವನ್ನು ತಿಳಿದ ಭದ್ರಾವತಿಯ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪ್ರಮುಖರು ಕುಟುಂಬದ ಸದಸ್ಯರ ಜೊತೆಗೆ ಮಾತನಾಡಿ ಇಡೀ ಕುಟುಂಬವನ್ನು ಭದ್ರಾವತಿಯ ಜನ್ನಾಪುರದ ಸಾರ್ವಜನಿಕ ರಾಮಭಜನಾಮಂದಿರದಲ್ಲಿ ಮರಳಿ ಹಿಂದೂ ಧರ್ಮಕ್ಕೆ ಕರೆ ತಂದಿದ್ದಾರೆ. ಈ ಸಂದರ್ಭದಲ್ಲಿ ಅರಕೆರೆಯ ಕರಿ ಸಿದ್ದೇಶ್ವರ ಸ್ವಾಮೀಜಿಗಳು, ಕೃಷ್ಣಮೂರ್ತಿ ಸೋಮಯಾಜಿಗಳು ಹಾಗೂ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

0 Comments