ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ಬಾಬರಿ ಮಸೀದಿ ಪುನರ್ ನಿರ್ಮಾಣ ಆಗುವವರೆಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರ ಹೋರಾಟ ನಡೆಸುತ್ತದೆ ಎಂದು ಶಿವಮೊಗ್ಗದ ಎಸ್.ಡಿ.ಪಿ.ಐ ಹೇಳಿಕೆ ನೀಡಿದೆ.

ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. ಬಾಬರಿ ಮಸೀದಿಯನ್ನು ಕೆಡವಿದ ಸ್ಥಳದಲ್ಲೇ ಮಸೀದಿ ನಿರ್ಮಾಣ ಆಗಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ದೇಶದ ಮುಸಲ್ಮಾನರಿಗೆ ಈ ಘಟನೆಯಿಂದ ತೀವ್ರ ನೋವುಂಟಾಗಿದೆ ಎಂದರು.

ಜಾತ್ಯಾತೀತ ಪ್ರತಿಪಾದಕರು ಡಿಸೆಂಬರ್ 06 ನ್ನು ಕರಾಳ ದಿನವನ್ನಾಗಿ ದೇಶಾದ್ಯಂತ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಬಾಬ್ರಿ ಮಸೀದಿ ಕೇವಲ ಮುಸ್ಲಿಮರ ಆರಾಧನಾ ಕ್ಷೇತ್ರವಲ್ಲ ಒಂದು ಪವಿತ್ರ ಸ್ಥಳವಾಗಿತ್ತು ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್‌‌‌‌‌ ಕೊಡ್ಲುಪೇಟೆ ಹೇಳಿದರು. 

ಬಾಬ್ರಿ ಮಸೀದಿ ಧ್ವಂಸ ಮಾಡಿದ ನಂತರದಲ್ಲಿ ಆಗಿನ ಪ್ರಧಾನಿಗಳಾಗಿದ್ದ ಪಿ.ವಿ ನರಸಿಂಹರಾವ್‌ ಅತೀ ಶೀಘ್ರವಾಗಿ ಬಾಬ್ರಿ ಮಸೀದಿ ಪುನರ್‌ನಿರ್ಮಾಣ ಮಾಡಿ ಕೊಡುವ ಭರವಸೆಯನ್ನು ನೀಡಿದ್ದರು ಆದರೆ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಕೂಡ ಮಸೀದಿಯನ್ನು ಮರು ನಿರ್ಮಾಣ ಮಾಡಿ ಕೊಡದೇ ಇರುವುದು ವಿಷಾದನೀಯ ಎಂದರು.

ಆದಷ್ಟು ಶೀಘ್ರವಾಗಿ ಈ ದುಷ್ಕೃತ್ಯ ನಡೆಸಿದವರಿಗೆ ಶಿಕ್ಷೆಯಾಗಬೇಕು ಹಾಗೂ ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದರು. ಈ ಸಮಯದಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.