ನರಸಿಂಹರಾಜಪುರ :(ನ್ಯೂಸ್ ಮಲ್ನಾಡ್ ವರದಿ) ನಮ್ಮ ಹೋರಾಟಕ್ಕೆ ಸ್ಪಂದಿಸಿ ಕಸ್ತೂರಿ ರಂಗನ್ ವರದಿ ವಿರೋಧಿಸಿದ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ ಎಂದು ಮಲೆನಾಡು ರೈತ ಹಿತರಕ್ಷಣಾ ಸಮಿತಿ, ನರಸಿಂಹರಾಜಪುರ ಅಧ್ಯಕ್ಷರು ಹೇಳಿದ್ದಾರೆ. ಹಾಗೆಯೇ ಅವೈಜ್ಞಾನಿಕ ಬಫರ್ ಜೋನ್ ಕುರಿತಾಗಿಯೂ ರೈತ ಪರ ತೀರ್ಮಾನಕ್ಕೆ ಒತ್ತಾಯ ಮಾಡಿದ್ದಾರೆ.
ಈ ಕುರಿತು ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿದ ಅವರು ಮಲೆನಾಡು ರೈತ ಹಿತರಕ್ಷಣಾ ಸಮಿತಿ, ನರಸಿಂಹರಾಜಪುರ ಪದಾಧಿಕಾರಿಗಳು ಈ ಹಿಂದೆ ಅಂದರೆ 15.10.2020 ರಂದು ಭದ್ರಾ ಹುಲಿ ಯೋಜನೆಯ ಬಫರ್ ಜೋನ್ ಪರಿಸರ ಸೂಕ್ಷ್ಮ ವಲಯ, ಕಸ್ತೂರಿರಂಗನ್ ವರದಿ ವಿರೋಧಿಸಿ ತಾಲೂಕು ಬಂದ್ ಮತ್ತು ಪ್ರತಿಭಟನೆ ನಡೆಸಿತ್ತು. ಇದರ ಫಲವಾಗಿ ಸಭೆಯಲ್ಲಿ ಭಾಗವಹಿಸಿದ್ದ ಡಿ.ಎನ್ ಜೀವರಾಜ್ ಮತ್ತು ಶೋಭಾ ಕರಂದ್ಲಾಜೆ ಹಾಗೂ ಟಿ.ಡಿ ರಾಜೇಗೌಡ ಮತ್ತು ಸಮಿತಿ ಒಳಗೊಂಡ ನಿಯೋಗ ಮುಖ್ಯಮಂತ್ರಿಯವರೊಂದಿಗೆ ಸಭೆಯನ್ನು ಜೋಡಿಸಿ ಸಮಿತಿಯ ನಿಯೋಗವನ್ನು ಬೆಂಗಳೂರು ವಿಧಾನಸೌಧಕ್ಕೆ ಕೊಂಡೊಯ್ದರು ಅಲ್ಲಿ ಮುಖ್ಯಮಂತ್ರಿಯವರೊಂದಿಗಿನ ಸಭೆಯಲ್ಲಿ ಎಲ್ಲಾ ಯೋಜನೆಗಳ ಪ್ರಸ್ತಾಪವನ್ನು, ವಿರೋಧವನ್ನು ವ್ಯಕ್ತಪಡಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಅಲ್ಲಿ ಆಗಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ರೈತರು ಪರಿಸರದ ಆಸ್ತಿ ಅವರನ್ನು ಉಳಿಸುವ ಕೆಲಸ ಮಾಡುತ್ತೇನೆ, ರೈತರ ಮತ್ತು ಮಲೆನಾಡಿನ ನಾಗರಿಕರ ಹಿತವನ್ನು ಕಾಯುವುದಾಗಿ ಭರವಸೆ ನೀಡಿ ಕಳಿಸಿದ್ದರು. ಅದರ ಫಲವಾಗಿ ಇಂದು ಬೊಮ್ಮಾಯಿ ಸರ್ಕಾರ ಮತ್ತೊಮ್ಮೆ ಯೋಜನೆಗಳ ವಿರುದ್ಧ ಕೇಂದ್ರ ಸರ್ಕಾರಕ್ಕೆ ಸ್ಪಷ್ಟತೆಯನ್ನು ನೀಡಿದೆ ಇದು ನಮ್ಮ ಹೋರಾಟಕ್ಕೆ ದೊರಕಿದ ಜಯ ಮತ್ತು ಮೈಲಿಗಲ್ಲು ಇದಕ್ಕೆ ಸ್ಪಂದಿಸಿದ ಡಿ.ಎನ್ ಜೀವರಾಜ್, ಶೋಭಾ ಕರಂದ್ಲಾಜೆ, ಟಿ.ಡಿ ರಾಜೇಗೌಡ, ಆರಗ ಜ್ಞಾನೇಂದ್ರ, ಎಂ.ಕೆ ಪ್ರಾಣೇಶ್ ಇವರುಗಳು ಮತ್ತೊಮ್ಮೆ ಮುಖ್ಯಮಂತ್ರಿಯವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಅದಕ್ಕಾಗಿ ಧನ್ಯವಾದಗಳು, ಈಗಾಗಲೇ ಘೋಷಿತವಾಗಿರುವ ಭದ್ರಾ ಹುಲಿ ಯೋಜನೆಯ ಬಫರ್ ಜೋನ್ ಯೋಜನೆಯನ್ನು ನರಸಿಂಹರಾಜಪುರ ಮತ್ತು ಇತರ ತಾಲೂಕಿನ ಗ್ರಾಮಗಳ ವ್ಯಾಪ್ತಿಯಿಂದ ಕೈಬಿಡುವಂತೆ ಹೋರಾಟವನ್ನು ನಡೆಸುತ್ತಿದ್ದೇವೆ. ಈ ಹೋರಾಟವನ್ನು ಪರಿಗಣಿಸಿ ಆದಷ್ಟು ಬೇಗ ಯೋಜನೆಯನ್ನು ಕೈಬಿಡುವ ಮೂಲಕ ರೈತರು ಮತ್ತು ನಾಗರಿಕರು ನೆಮ್ಮದಿಯ ಬದುಕನ್ನು ಮಲೆನಾಡಿನಲ್ಲಿ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಅನುವು ಮಾಡಿಕೊಡಬೇಕು ಮತ್ತು ನಮ್ಮ ಮನವಿಯನ್ನ ಪುರಸ್ಕರಿಸಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸಮಿತಿಯ ಅಧ್ಯಕ್ಷರಾದ ಎಮ್.ಎನ್. ನಾಗೇಶ್, ಉಪಾಧ್ಯಕ್ಷರಾದ ದೇವಂತ್ , ಪ್ರಧಾನ ಕಾರ್ಯದರ್ಶಿಗಳಾದ ರತ್ನಾಕರ್ ಗಡಿಗೇಶ್ವರ, ಪುರುಷೋತ್ತಮ ಕುಸ್ಕಲ್, ಖಜಾಂಜಿ ಚರಣ್ ಕುಮಾರ್, ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

0 Comments