ಮೂಡಿಗೆರೆ : 2019 ನೆಯ ಇಸವಿಯಲ್ಲಿ ನೆರೆ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಬಂಕೇನಹಳ್ಳಿ ಸೇತುವೆಯ ಕಾಮಗಾರಿ ಇಂದಿನಿಂದ ಆರಂಭವಾಗಿದೆ.
2019 ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಂಕೇನಹಳ್ಳಿ ಸೇತುವೆ ಕೊಚ್ಚಿ ಹೋಗಿ ಬಂಕೇನಹಳ್ಳಿ, ಕೂಡಳ್ಳಿ, ಚೇಗು ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿತ್ತು. ಮಳೆಗೆ ಬಂಕೇನ ಹಳ್ಳಿಯ ಸುತ್ತ ಮುತ್ತಲಿನ ಗ್ರಾಮಸ್ಥರು ಬಹಳಷ್ಟು ಸಂಕಷ್ಟವನ್ನು ಅನುಭವಿಸಿದ್ದರು ಸಂಪರ್ಕವೇ ಇಲ್ಲದೆ ಕಷ್ಟ ಅನುಭವಿಸಿದ್ದರು.
ಮಳೆ ಕಡಿಮೆಯಾದ ನಂತರದಲ್ಲಿ ಗ್ರಾಮಸ್ಥರೇ ಅಡಿಕೆ ಮರದಿಂದ ಕಾಲುಸಂಕ ನಿರ್ಮಿಸಿಕೊಂಡಿದ್ದರು. ಆದರೆ ನಂತರದ ವರ್ಷದಲ್ಲಿ ಸುರಿದ ಮಳೆಯಿಂದ ಅಡಿಕೆ ಮರದ ಕಾಲುಸಂಕ ಕೊಚ್ಚಿ ಹೋಗಿ ಪುನಃ ಗ್ರಾಮಗಳಿಗೆ ಸಂಪರ್ಕವೇ ಇಲ್ಲದಂತಾಗಿತ್ತು. ಗ್ರಾಮಕ್ಕೆ ಜನಪ್ರತಿನಿಧಿಗಳು ಆಗಮಿಸಿದಾಗ ಗ್ರಾಮಸ್ಥರು ಸೇತುವೆ ನಿರ್ಮಿಸುವಂತೆ ಪಟ್ಟು ಹಿಡಿದಿದ್ದರು.
ಆ ನಂತರದಲ್ಲಿ ತಾತ್ಕಾಲಿಕ ಕಬ್ಬಿಣದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಕಾರು ಮುಂತಾದ ವಾಹನಗಳು ಆ ಸೇತುವೆಯಲ್ಲಿ ಸಂಚರಿಸಲು ಸಾದ್ಯವಾಗುತ್ತಿರಲಿಲ್ಲ. ಕೆಲದಿನಗಳ ಹಿಂದೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ನೂತನ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು ಇದೀಗ ಸೇತುವೆ ಕಾಮಗಾರಿ ಆರಂಭವಾಗಿದೆ.
ಜೆಸಿಬಿ ಯಂತ್ರಗಳ ಮೂಲಕ ಹಳೆಯ ಸೇತುವೆ ತೆರವುಗೊಳಿಸಲಾಗುತ್ತಿದ್ದು ಸೇತುವೆ ಕಾಮಗಾರಿ ಬಿರುಸಿನಿಂದ ಸಾಗಿದೆ. ಗ್ರಾಮಸ್ಥರ ಹಲವು ವರ್ಷಗಳ ಅತ್ಯಾವಶ್ಯಕ ಬೇಡಿಕೆಯು ಈಡೇರುವ ಸಮಯ ಇದೀಗ ಬಂದಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments