ನರಸಿಂಹರಾಜಪುರ :(ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ತೆಂಕುತಿಟ್ಟು ಯಕ್ಷಗಾನ ಕಲಾವಿದ ಶ್ರೀ ಶಿವರಾಮ ಶೆಟ್ಟಿ ಅವರು ನಿಧನ ಹೊಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ನಿವಾಸಿ ಹೊಸಕೊಪ್ಪ ಶಿವರಾಮ ಶೆಟ್ಟಿ ಅವರು ನಿಧನ ಹೊಂದಿದರು. ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನದಲ್ಲಿ ಬಹಳ ನಿಸ್ಸೀಮರಾಗಿದ್ದ ಶಿವರಾಮ ಶೆಟ್ಟರು ಯಕ್ಷಗಾನ ಪ್ರಿಯರ ಪಾಲಿಗೆ ಉತ್ತಮ ಪಾತ್ರಧಾರಿಯಾಗಿದ್ದರು.
ಗಂಭೀರ ಪುರುಷ ಪಾತ್ರಗಳನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸಿ ನೋಡುಗರ ಮನಸ್ಸಿಗೆ ಬಹಳ ಖುಷಿಯನ್ನು ನೀಡುತ್ತಿದ್ದರು. ಪ್ರಮುಖವಾಗಿ ಸಾಲಿಗ್ರಾಮ, ಮಂದಾರ್ತಿ, ನಾಗರಕೊಡಿಗೆ, ಸೌಕೂರು, ರಂಜದಕಟ್ಟೆ ಮುಂತಾದ ಮೇಳಗಳಲ್ಲಿ ಪ್ರಸಿದ್ಧಿ ಹೊಂದಿದ್ದರು. ಕಟೀಲು ಮೇಳದಲ್ಲಿ ಇವರ ಪಾತ್ರವು ಬಹಳ ಹೆಗ್ಗಳಿಕೆಗೆ ಪಾತ್ರವಾಗಿತ್ತು.
2015 ರಲ್ಲಿ ಶ್ರೀಯುತರಿಗೆ ಡಾ. ಬಿ.ಬಿ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಲಭಿಸಿತ್ತು. ಶ್ರೀಯುತರು ಪತ್ನಿ ಹಾಗೂ ಓರ್ವ ಪುತ್ರ ಮತ್ತು ಪುತ್ರಿಯನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ಸಾವಿನ ಕುರಿತಾಗಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

0 Comments