ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶೀಘ್ರವಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ವೈದ್ಯರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಾರ್ವಜನಿಕರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗದ ಜಿಲ್ಲಾಸ್ಪತ್ರೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ರಾಜ್ಯದ ಹಲವೆಡೆಗಳಿಂದ ರೋಗಿಗಳು ಬರುತ್ತಾರೆ ಇಲ್ಲಿನ ವೈದ್ಯರ ಸೇವೆಯೂ ಬಹಳಷ್ಟು ಉತ್ತಮವಾಗಿದೆ ಆದರೆ ಇಲ್ಲಿನ ವೈದ್ಯರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ನೀಡಲು ಯಾವ ಅಧಿಕಾರಿಗಳು ಕೂಡ ಮುಂದೆ ಬರುತ್ತಿಲ್ಲ ಎಂದು ಕೆಪಿಸಿಸಿ ಪದಾಧಿಕಾರಿಗಳು ದೂರಿದ್ದಾರೆ.

ಕೋವಿಡ್ ನ ಎರಡು ಅಲೆಗಳ ತೀವ್ರ ಸಂಕಷ್ಟ ಸಮಯದಲ್ಲಿ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿವರ್ಗ ಬಹಳ ಅಚ್ಚುಕಟ್ಟಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖಪಡಿಸಿತ್ತು ಆದರೆ ಸರ್ಕಾರವು ವೈದ್ಯರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡದೆ ಅವರ ಸೇವೆಗೆ, ಕರ್ತವ್ಯಕ್ಕೆ ಪ್ರತಿಯಾಗಿ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಆಗಿ 9 ಜನ ವೈದ್ಯರು ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಸೀನಿಯರ್ ರೆಸಿಡೆಂಟ್ ಒಬ್ಬರಿಗೆ 60 ಸಾವಿರ ರೂಪಾಯಿ ಸಂಬಳವಿರುತ್ತದೆ ಆದರೆ 4 ತಿಂಗಳಿನಿಂದ ಸಂಬಳ ಬಾರದೆ ವೈದ್ಯರು ಸಮಸ್ಯೆಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಲ್ಲದೆ ಪಿ.ಜಿ ವಿಧ್ಯಾರ್ಥಿಗಳ ಶುಲ್ಕವನ್ನು ಕೊರೋನ ಮೊದಲನೆಯ ಅಲೆ ನಂತರ ಹೆಚ್ಚಳ ಮಾಡಿರುವುದು ಬಡ ವಿಧ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕಿದಂತಿದೆ. ಅದೆಷ್ಟೋ ಜನರು ಹಣವಿಲ್ಲದೆ ಉನ್ನತ ಶಿಕ್ಷಣವನ್ನು ಪಡೆಯುವ ಆಸೆಯನ್ನು ಹಾಗೆಯೇ ಉಳಿಸಿಕೊಂಡು ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿಯಾದ ಕೆ ದೇವೇಂದ್ರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಪಿ ಗಿರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕೆ ರಂಗನಾಥ್ ಅವರು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ರವರು, ಡಿಕೆ ಶಿವಕುಮಾರ್ ಅಭಿಮಾನಿ ಬಳಗ ಅಧ್ಯಕ್ಷರಾದ ಮೋಹನ್ ರವರು ಡಾಕ್ಟರ್ ದಿನೇಶ್, ಎಸ್ ಎಂ ಶರತ್ ರವರು ಹಾಗೂ ಇತರರು ಇದ್ದರು.