ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ದತ್ತಮಾಲಾ ಅಭಿಯಾನದ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಇಂದು ದತ್ತಮಾಲಾಧಾರಿಗಳು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಗುರು ದತ್ತಾತ್ರೇಯ ಪೀಠಕ್ಕೆ ಭಕ್ತಿಭಾವಗಳಿಂದ ಭೇಟಿ ನೀಡಿದರು.
ಜಿಲ್ಲೆಯ ಹಲವೆಡೆಗಳಿಂದ ದತ್ತಮಾಲಾಧಾರಿಗಳು ಇಂದು ದತ್ತಪೀಠಕ್ಕೆ ಆಗಮಿಸಿ ದತ್ತಾತ್ರೇಯ ಪೀಠದಲ್ಲಿ ನಡೆದ ಹೋಮ ಹವನಗಳಲ್ಲಿ ಭಾಗಿಯಾದರು, ವಿಶ್ವಹಿಂದೂ ಪರಿಷತ್ ನ ಗಣ್ಯರ ಸಮ್ಮುಖದಲ್ಲಿ ಹಾಗೂ ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ಇಂದು ದತ್ತಪೀಠದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ದಾರಿಯುದ್ದಕ್ಕೂ ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸುತ್ತಾ ದತ್ತ ಭಕ್ತರು ದತ್ತಾತ್ರೇಯ ಪೀಠಕ್ಕೆ ಆಗಮಿಸಿದರು.
ಜಿಲ್ಲೆಯಾದ್ಯಂತ ಚೆಕ್ಪೋಸ್ಟ್ ಗಳ ನಿರ್ಮಾಣ :
ರಾಜ್ಯದ ಹಲವೆಡೆಗಳಿಂದ ದತ್ತಭಕ್ತರು ಆಗಮಿಸುವ ಸಲುವಾಗಿ ಜಿಲ್ಲೆಯಲ್ಲಿ ಅಶಾಂತಿ ಹಾಗೂ ಯಾವುದೇ ರೀತಿಯ ಗೊಂದಲದ ವಾತಾವರಣಗಳು ನಿರ್ಮಾಣವಾಗದಂತೆ ಸೂಕ್ತ ಕ್ರಮಗಳನ್ನು ಅನುಸರಿಸುವ ಸಲುವಾಗಿ ಜಿಲ್ಲೆಯ ಹಲವೆಡೆಗಳಲ್ಲಿ ಪೊಲೀಸರು ಚೆಕ್ ಪೋಸ್ಟ್ಗಳನ್ನು ನಿರ್ಮಾಣಮಾಡಿ ತಪಾಸಣೆ ನಡೆಸಿದರು.
ಟ್ರಾಫಿಕ್ ಜಾಮ್ :
ಸಹಸ್ರಾರು ಸಂಖ್ಯೆಯಲ್ಲಿ ದತ್ತ ಭಕ್ತರು ವಾಹನಗಳಲ್ಲಿ ಆಗಮಿಸಿದ ಕಾರಣ ಕೈಮರದಲ್ಲಿ ಕೆಲಹೊತ್ತು ಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನಗಳಿಗೆ ಹನುಮಂತ, ಛತ್ರಪತಿ ಶಿವಾಜಿ ಚಿತ್ರವುಳ್ಳ ಕೇಸರಿ ಧ್ವಜಗಳನ್ನು ವಾಹನಕ್ಕೆ ಕಟ್ಟಿಕೊಂಡು ಅಧಿಕ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು ಆಗಮಿಸಿದ್ದರು.
ಇಷ್ಟು ದಿನಗಳ ಕಾಲ ಜಿಲ್ಲೆಯಾದ್ಯಂತ ದತ್ತ ಜಯಂತಿಯ ಅಂಗವಾಗಿ ನಡೆದ ಶೋಭಾಯಾತ್ರೆ ಧಾರ್ಮಿಕ ಸಭೆಗಳು ದತ್ತ ಜಯಂತಿಯ ದಿನವಾದ ಇಂದು ತೆರೆ ಕಂಡಿದೆ. ಗುರು ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದ ಮಾಲಾಧಾರಿಗಳು ಸಂಜೆಯ ವೇಳೆಗೆ ಹಿಂದಿರುಗಿದರು.

0 Comments