ಸೊರಬ : (ನ್ಯೂಸ್ ಮಲ್ನಾಡ್ ವರದಿ) ಪ್ರಾಣಿಯೊಂದನ್ನು ಬೇಟೆಯಾಡಿ ಮಾಂಸವನ್ನು ಪಾಲು ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದ ತಂಡವನ್ನು ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸೊರಬದ ಕೆರೆಕೊಪ್ಪ ಗ್ರಾಮದಲ್ಲಿ ಬೇಟೆಯಾಡುತ್ತಿದ್ದ ಐವರಲ್ಲಿ ಓರ್ವನನ್ನು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆರೆಕೊಪ್ಪದ ನಿವಾಸಿ ನಾರಾಯಣಪ್ಪ ಎಂಬಾತ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸರ್ಕಾರಿ ಜಾಗದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಪಾಲು ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ನಾರಾಯಣಪ್ಪ ಅವರಿಂದ ಹತ್ತು ಕೆ.ಜಿ ಮಾಂಸ, ಎರಡು ದ್ವಿಚಕ್ರ ವಾಹನ, ಎರಡು ಕತ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ನಾಲ್ವರು ಆರೋಪಿಗಳು ಪೊಲೀಸರಿಗೆ ಸಿಗದೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಉಳಿದ ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಮುಖ್ಯವಾಗಿ ಸಾಗರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನ್ ಕುಮಾರ್ ಹಾಗೂ ಸೊರಬ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಬಸ್ರೂರ್ ಪಾಲ್ಗೊಂಡಿದ್ದರು. ಅವರ ಸೂಚನೆಗಳ ಮೇರೆಗೆ ಆನವಟ್ಟಿ ವಲಯ ಅರಣ್ಯಾಧಿಕಾರಿ ಜಾವೆದ್ ಬಾಷಾ ಅಂಗಡಿ, ಡಿವೈಆರ್‌ಎಫ್‌ಒ ವೀರಭದ್ರಯ್ಯ, ಅರಣ್ಯ ರಕ್ಷಕರಾದ ಟಿ. ಮುರುಳಿ, ಉಮೇಶ ಬೇವಿನಗಿಡದ, ದೊಡ್ಡಬಸಯ್ಯ ಪಾಲ್ಗೊಂಡು ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

0 Comments