ಮಲೆನಾಡು/ ತಮಿಳುನಾಡು: (ನ್ಯೂಸ್ ಮಲ್ನಾಡ್ ವರದಿ) ನಕ್ಸಲ್ ಚಟುವಟಿಕೆಗಳ ಮೂಲಕ ಪಶ್ಚಿಮಘಟ್ಟಗಳಲ್ಲಿ ಗುರುತಿಸಿಕೊಂಡಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಇಂದು ತಮಿಳುನಾಡಿನ ವೆಲ್ಲೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ಪ್ರಭಾ, ಅಲಿಯಾಸ್ ಹೊಸಗದ್ದೆ ಪ್ರಭಾ, ಅಲಿಯಾಸ್ ಸಂಧ್ಯಾ, ಅಲಿಯಾಸ್ ವಿಂಧು, ಅಲಿಯಾಸ್ ನೇತ್ರಾ, ಅಲಿಯಾಸ್ ಮಧು ಮುಂತಾದ ಹೆಸರುಗಳಿಂದ ಪ್ರಭಾ ಅವರನ್ನು ಕರೆಯಲಾಗುತ್ತಿತ್ತು.

2010 ರಲ್ಲಿ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದ್ದರೂ ಅದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ರಾಜ್ಯ ಸರ್ಕಾರ ಹೊಸಗದ್ದೆ ಪ್ರಭಾ ಪತ್ತೆಗಾಗಿ 5 ಲಕ್ಷ ರೂಪಾಯಿ ಬಹುಮಾನ ಸಹ ಘೋಷಿಸಿತ್ತು.

ಇತ್ತೀಚೆಗಷ್ಟೇ ನಕ್ಸಲ್ ನಾಯಕ ಬಿಜಿ ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ಕೇರಳ ಪೊಲೀಸರು ಬಂಧಿಸಿದ್ದರು.

ಪ್ರಭಾ ಸಾವಿನ ಸುದ್ದಿ : 

ಪ್ರಭಾ ಸಾವನ್ನಪ್ಪಿದ್ದಾರೆ ಎಂದು 2010ರಲ್ಲಿ ಸುದ್ದಿ ಹರಡಿಸಲಾಗಿತ್ತು, ಆಕೆಯ ಶವವನ್ನು ಪಶ್ಚಿಮ ಘಟ್ಟದ ಕಾಡಿನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಸಹ ಸುದ್ದಿ ಬಿತ್ತರಿಸಲಾಗಿತ್ತು, ಆದರೆ ಈಗ ಶರಣಾಗುವ ಮೂಲಕ ಮಹತ್ವದ ತಿರುವು ಪಡೆದಿದೆ.

ಈ ಮೂಲಕ ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಳುವಳಿ ಸಂಪೂರ್ಣ ನೆಲಕಚ್ಚಿದಂತಾಗಿದೆ.