ಹಾಸನ :(ನ್ಯೂಸ್ ಮಲ್ನಾಡ್ ವರದಿ) ವಿಧಾನ ಪರಿಷತ್ ಚುನಾವಣೆಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಜೆಡಿಎಸ್ ಪಕ್ಷದಿಂದ ಹಾಸನದಲ್ಲಿ ಸ್ಪರ್ಧೆ ನಡೆಸುತ್ತಿರುವ ಸೂರಜ್ ರೇವಣ್ಣ ಅವರು ಈ ಹಿಂದೆ ನಾಮಪತ್ರ ಸಲ್ಲಿಸಿದ್ದರು. ಅವರು ಸಲ್ಲಿಸಿರುವ ನಾಮಪತ್ರ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಓರ್ವ ವ್ಯಕ್ತಿಯು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು ಪ್ರಸ್ತುತ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮಾಜಿ ಸಚಿವ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಅವರು ಎಂ.ಎಲ್.ಸಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸುವುದಾಗಿ ಈ ಹಿಂದೆ ನಾಮಪತ್ರ ಸಲ್ಲಿಸಿದ್ದರು ಆದರೆ ನಮೂನೆ 26 ರ ಅಡಿಯಲ್ಲಿನ ಪ್ರಮಾಣ ಪತ್ರದಲ್ಲಿ ಅನೇಕ ಮಾಹಿತಿಗಳನ್ನು ತುಂಬಿಲ್ಲ, ಬೇಕೆಂದೇ ಗೌಪ್ಯವಾಗಿ ಇರಿಸಿದ್ದಾರೆ ಎಂದು ಆರೋಪಿಸಿ ಹಾಸನ ಜಿಲ್ಲೆ ದಂಡಿಗಾನ ಹೋಬಳಿಯ ಕುಂದೂರು ಗ್ರಾಮದ ಕೆ.ಎಲ್.ಹರೀಶ್‌ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಮಾಡಿದೆ.

ಆಕ್ಷೇಪಣೆಗಳು ಕಂಡು ಬಂದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿ ಅಲ್ಲಿಯೇ ನೀವು ಪರಿಹರಿಸಿಕೊಳ್ಳಿ, ಒಮ್ಮೆ ಚುನಾವಣಾ ದಿನಾಂಕ ಹಾಗೂ ವೇಳಾಪಟ್ಟಿ ನಿಗದಿಯಾದ ನಂತರದಲ್ಲಿ ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಚುನಾವಣಾ ತಕರಾರು  ಮೂಲಕ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.