ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಹಳ ಕುತೂಹಲ ಹಾಗೂ ಜಿದ್ದಾ ಜಿದ್ದಿನ ಕ್ಷೇತ್ರವಾಗಿದ್ದ ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ  ಸ್ಪರ್ಧೆ ನಡೆಸಿದ್ದ ಎಂ.ಕೆ ಪ್ರಾಣೇಶ್ ಅವರು 6 ಮತಗಳಿಂದ ರೋಚಕ ಗೆಲುವನ್ನು ಸಾಧಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಗಾಯತ್ರಿ ಶಾಂತೇಗೌಡ ಅವರು ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದರು. ಬಿಜೆಪಿಯ ಎಂ.ಕೆ ಪ್ರಾಣೇಶ್ ಅವರು ಎರಡನೇ ಬಾರಿಗೆ ಗೆಲುವನ್ನು ತಮ್ಮದಾಗಿಸಿಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಸೋಲನ್ನು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಅವರಿಗೆ 1188 ಮತಗಳು ದೊರೆತರೆ, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರಿಗೆ 1182 ಮತಗಳು ಲಭಿಸಿದೆ. ಈ ಚುನಾವಣೆಯಲ್ಲಿ ಚಲಾವಣೆಗೊಂಡ 2410 ಮತಗಳಲ್ಲಿ, 39 ಮತಗಳು ಅಸಿಂಧುಗೊಂಡಿದೆ. 06 ಮತಗಳ ಮೂಲಕ ಎಂ.ಕೆ ಪ್ರಾಣೇಶ್ ಅವರು ರೋಚಕ ಗೆಲುವನ್ನು ಸಾಧಿಸಿದ್ದಾರೆ.

ವರ್ಕೌಟ್ ಆಯ್ತು ಜಾತಿ ಲೆಕ್ಕಾಚಾರ:

ಚಿಕ್ಕಮಗಳೂರು ಪರಿಷತ್ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಬಹಳಷ್ಟು ವರ್ಕೌಟ್ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ಒಕ್ಕಲಿಗ ಸಮುದಾಯದ ಪ್ರಾಣೇಶ್ ಒಂದಷ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಒಕ್ಕಲಿಗರ ಮತಗಳನ್ನು ಸೆಳೆದರೆ, ಕುರುಬ ಸಮುದಾಯದ ಗಾಯಿತ್ರಿ ಶಾಂತೇಗೌಡ ಅವರು ಬಿಜೆಪಿಯ ಕುರುಬ ಸಮುದಾಯದ ಮತಗಳನ್ನು ಪಡೆದಿದ್ದಾರೆ. ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಗೆ ಇದು ಅನುಕೂಲವಾಗಿದೆ.

"ಕೈ"ಗೆ "ಕೈ"ಕೊಟ್ಟ ಹಳೆಯ ಆಡಳಿತದ ಎಫೆಕ್ಟ್: 

ಈ ಹಿಂದೆ ಪ್ರಾಣೇಶ್ ಅವರಿಗೂ ಮೊದಲು ಗಾಯಿತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ನಿಭಾಯಿಸಿದ್ದರು, ಆದರೆ ಆ ಸಮಯದಲ್ಲಿ ಸರ್ವಾಧಿಕಾರಿ ಧೋರಣೆ ತೆಳೆದಿದ್ದರು ಎಂದು ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ಇದು ಸಹ ಗಾಯಿತ್ರಿ ಶಾಂತೇಗೌಡರ ಸೋಲಿಗೆ ಒಂದು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಚುನಾವಣಾ ದಿನಾಂಕ ಘೋಷಣೆಯಾದ ನಂತರದ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ರಾಜಕೀಯ ರಂಗದಲ್ಲಿ ಬಹಳಷ್ಟು ಏರಿಳಿತಗಳು ನಡೆದಿತ್ತು ಹಾಗೂ ಅನೇಕರು ಪಕ್ಷದಿಂದ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಎಂಕೆ ಪ್ರಾಣೇಶ್ ಅವರಿಗೆ ಹಲವಾರು ರಾಜಕೀಯ ಮುಖಂಡರು ಹಾಗೂ ಬೆಂಬಲಿಗರು ಅಭಿನಂದನೆಗಳನ್ನು ಕೋರುತ್ತಿದ್ದಾರೆ ಹಾಗೂ ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವವನ್ನು ಆಚರಿಸುತ್ತಿದ್ದಾರೆ.