ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಅತ್ಯುತ್ತಮ ಮಾನವೀಯ ವರದಿ ವಿಭಾಗದ ಪ್ರಶಸ್ತಿಯು ಟಿವಿ 9 ಸುದ್ದಿವಾಹಿನಿಯ ಚಿಕ್ಕಮಗಳೂರು ವರದಿಗಾರ ಪ್ರಶಾಂತ್ ಅವರಿಗೆ ಲಭಿಸಿದೆ.
ರಾಜ್ಯದ ಪ್ರತಿಷ್ಠಿತ ಸಂಘವಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಘಟಕವನ್ನು ಹೊಂದಿದೆ ಹಾಗೂ ರಾಜ್ಯಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ್ರಕರ್ತರ ಸಂಘಟನೆಯಾಗಿದೆ. 1932 ರಲ್ಲಿ ಡಿ.ವಿ ಗುಂಡಪ್ಪ ಅವರು ಹುಟ್ಟು ಹಾಕಿದ ಸಂಘಟನೆ ಇದಾಗಿದೆ.
ಸಂಘದ ವತಿಯಿಂದ ನೀಡುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯು ಮೂಡಿಗೆರೆಯ ಪ್ರಶಾಂತ್ ಅವರಿಗೆ ಲಭಿಸಿದೆ, ಹಾಗೆಯೇ ಮಲೆನಾಡಿನ ಭಾಗದವರಾಗಿ ಕೊಡಗಿನ ಜಿ. ರಾಜೇಂದ್ರ ಅವರಿಗೆ ರಾಜಶೇಖರ ಕೋಟಿ ಪ್ರಶಸ್ತಿ ಲಭಿಸಿದೆ, ಆರ್. ಎಲ್ ವಾಸುದೇವರಾವ್ ಪ್ರಶಸ್ತಿಯು ಶಿವಮೊಗ್ಗದ ಸೋಮಶೇಖರ ಅವರಿಗೆ ದೊರೆತಿದೆ, ಮಂಡಿಬೆಲೆ ಶಾಮಣ್ಣ ಪ್ರಶಸ್ತಿಯು ಸೋಮವಾರಪೇಟೆಯ ಮುರುಳೀಧರ ಎಸ್.ಎ ಅವರಿಗೆ ದೊರೆತಿದೆ.
ಈ ಹಿಂದೆ ಕೊಡಗು ಜಿಲ್ಲೆಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಅವರು 2018 ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಡಿಕೇರಿಯಲ್ಲಿ ನಡೆದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ವರದಿಗಾರರಾಗಿ ಬಹಳಷ್ಟು ಶ್ರಮವಹಿಸಿ ವರದಿಗಾರಿಕೆ ಮಾಡಿದ್ದರು. ಪ್ರಕೃತಿ ಹಾಗೂ ಮನುಷ್ಯರ ನಡುವೆ ನಡೆದ ಈ ಯುದ್ಧದಲ್ಲಿ ತಮ್ಮ ಜೀವದ ಸುರಕ್ಷತೆಯನ್ನು ಸಹ ಲೆಕ್ಕಿಸದೇ ವರದಿಗಾರಿಕೆ ಮಾಡಿದ್ದರು ಹಾಗೂ ಸಂಕಷ್ಟದಲ್ಲಿದ್ದ ಅನೇಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಹಾಯ ಮಾಡಿದ್ದರು.
ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಇಡೀ ಕೊಡಗು ನಲುಗಿಹೋಗಿತ್ತು, ಮಳೆಯ ಆರ್ಭಟಕ್ಕೆ ಸಾವಿರಾರು ಜನರು ನಿರಾಶ್ರಿತರಾಗಿದ್ದರು ಒಂದು ಹೊತ್ತಿನ ಊಟ ತಿಂಡಿಗೂ ಸಹ ಜನರು ಕಷ್ಟಪಟ್ಟಿದ್ದರು. ಅಂತಹ ಕ್ಲಿಷ್ಟಕರ ಸಂದರ್ಭಗಳಲ್ಲಿ ನೈಜ ವರದಿಯನ್ನು ಮಾಡಿದ ಹೆಮ್ಮೆಯ ವರದಿಗಾರ ಟಿವಿ 9 ಪ್ರಶಾಂತ್. ಹಲವಾರು ಜನರ ಕಷ್ಟಗಳನ್ನು ನೀಗಿಸುವಲ್ಲಿ ಇವರೂ ಕೂಡ ತಮ್ಮಲ್ಲಾದ ಸಹಾಯವನ್ನು ಮಾಡಿ ನೊಂದವರ ಬಾಳಿಗೆ ಧೈರ್ಯ ತುಂಬಿದ್ದರು. ಪ್ರಸ್ತುತ ಪ್ರಶಾಂತ್ ಅವರು ಟಿವಿ 9 ಸುದ್ದಿ ವಾಹಿನಿಯ ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

0 Comments