ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರಸಭೆ ಚುನಾವಣೆಯ ಮತ ಎಣಿಕೆ ಮುಗಿದಿದ್ದು ಈ ಬಾರಿಯೂ ನಗರಸಭೆಯನ್ನು ಭಾರತೀಯ ಜನತಾ ಪಾರ್ಟಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 02, ಎಸ್.ಡಿ.ಪಿ.ಐ 01 ಹಾಗೂ 02 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಹಿಂದಿನಿಂದಲೂ ಬಿಜೆಪಿಯ ಭದ್ರ ಕೋಟೆ ಎಂದೆನಿಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯು ನಗರಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಖಾತೆ ತೆರೆದ ಎಸ್.ಡಿ.ಪಿ.ಐ :
ಚಿಕ್ಕಮಗಳೂರು ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರಿನಲ್ಲಿ ತನ್ನ ಖಾತೆಯನ್ನು ತೆರೆದಿದೆ.
ತಮ್ಮ ತಮ್ಮ ಅಭ್ಯರ್ಥಿಗಳು ಗೆದ್ದ ಖುಷಿಯಲ್ಲಿ ಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವವನ್ನು ಆಚರಿಸುತ್ತಿದ್ದಾರೆ. ಪಟಾಕಿ ಸಿಡಿಸಿ ಸಿಹಿ ಹಂಚಿ ನೃತ್ಯಗಳನ್ನು ಮಾಡುವ ಮೂಲಕ ಅಸಂಖ್ಯಾತ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಒಟ್ಟಾರೆ ಇಷ್ಟು ದಿನಗಳ ಕಾಲ ರಂಗೇರಿದ್ದ ಚಿಕ್ಕಮಗಳೂರು ನಗರಸಭಾ ಚುನಾವಣಾಕಣ ಮತ ಎಣಿಕೆಯ ಮೂಲಕ ತಣ್ಣಗಾಗಿದೆ.

0 Comments