ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಡಾ. ಬಿ ಆರ್ ಗಂಗಾಧರಪ್ಪ ಅವರು ಭಾರತ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಮಿಳು ನಾಡಿನ ಹೊಸೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಕ್ಷಕ ಗಂಗಾಧರಪ್ಪ ಅವರ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕಾರ್ಯಕ್ಕೆ ಏಷಿಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯು ಭಾರತ ಸೇವಾರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ಶಿಕ್ಷಕರಾದ ಗಂಗಾಧರಪ್ಪ ಅವರನ್ನು ಗೌರವಿಸಿದೆ.
ಶ್ರೀಯುತ ಡಾ.ಬಿ.ಆರ್ ಗಂಗಾಧರಪ್ಪ ಅವರು ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007 ರಿಂದ ಮೆಣಸೆ ಶಾಲೆಯಲ್ಲಿ ತಮ್ಮ ಸೇವೆಯನ್ನು ಆರಂಭಿಸಿದ ಅವರು ಶಾಲೆಯ ಉನ್ನತಿಗಾಗಿ ಹಾಗೂ ಮಕ್ಕಳ ಜ್ಞಾನಾರ್ಜನೆಯ ಸಲುವಾಗಿ ತರಹೇವಾರಿ ಆಧುನಿಕತೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರಿ ಶಾಲೆಗಳು ಯಾವುದೇ ಖಾಸಗೀ ಶಾಲೆಗಳಿಗಿಂತ ಕಡಿಮೆಯಿಲ್ಲ ಎಂಬಂತೆ ಮೆಣಸೆ ಸರ್ಕಾರಿ ಶಾಲೆಯನ್ನು ಅತ್ಯುನ್ನತ ಸೌಲಭ್ಯಗಳಿಂದ ಕಲ್ಪಿಸಿದ್ದಾರೆ. ಸರ್ಕಾರಿ ಶಾಲೆಗೆ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಇವರ ಪಾತ್ರ ಮಹತ್ವದ್ದು. ಈ ರೀತಿಯ ಅನೇಕ ಉಪಯುಕ್ತ ಸೌಲಭ್ಯಗಳು ಮಕ್ಕಳಿಗೆ ದೊರಕುವಂತೆ ಶಿಕ್ಷಕ ಗಂಗಾಧರಪ್ಪ ಸೇವೆ ಸಲ್ಲಿಸಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಸಲೆಕೆರೆ ಎಂಬ ಗ್ರಾಮದಲ್ಲಿ ಜನಿಸಿದ ಇವರು ವಿಧ್ಯಾಭ್ಯಾಸದ ನಂತರ ಶೃಂಗೇರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿರುವ ಗಂಗಾಧರಪ್ಪ ಅವರು ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೋಧನಾ ಕಾರ್ಯಾಗಾರವನ್ನು ಅತ್ಯುತ್ತಮವಾಗಿ ನೆರವೇರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಮುಂದಿನ ಸೇವಾಜೀವನವೂ ಕೂಡ ಯಶಸ್ಸಿನಿಂದ ಕೂಡಿರಲಿ ಇನ್ನಷ್ಟು ಹೆಚ್ಚಿನ ಕಾರ್ಯಗಳು ಮುಖ್ಯ ಶಿಕ್ಷಕರಾದ ಡಾ.ಗಂಗಾಧರಪ್ಪ ಅವರಿಂದಾಗಲಿ ಎಂದು ಶಿಕ್ಷಕರು, ಹಾಗೂ ಸಾರ್ವಜನಿಕರು ಶುಭ ಕೋರಿದ್ದಾರೆ.

0 Comments