ಚಿಕ್ಕಮಗಳೂರು : ರೋಗಿ ಓರ್ವರಿಗೆ ಕೊರೋನ ಸೋಂಕು ತಗುಲದೇ ಇದ್ದರೂ ಕೂಡ ಆಸ್ಪತ್ರೆಯ ನರ್ಸ್ ಒಬ್ಬರು ಅವರನ್ನು ಸೊಂಕಿತೆ ಎಂದು ಬಿಂಬಿಸಿ ಅವರ ಆತ್ಮಸ್ಥೈರ್ಯ ಕುಗ್ಗಿಸಿ ಅವರ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಎಂಜಿಎಂ ಆಸ್ಪತ್ರೆಗೆ ಅನಾರೋಗ್ಯದ ಕಾರಣ ರಾಧಮ್ಮ ಎಂಬ ಅಜ್ಜಿಯನ್ನು ಸಂಬಂಧಿಯೋರ್ವರು ದಾಖಲಿಸಿದ್ದರು. ಕೊರೋನ ವರದಿ ಬರುವ ಮುಂಚೆಯೇ ನರ್ಸ್ ಪ್ರಭಾ ಎನ್ನುವವರು ಅಜ್ಜಿಗೆ ಕೊರೋನ ಇದೆ ಎಂದು ಹೇಳಿದ್ದರು ಅಜ್ಜಿಯ ಸಾವಿಗೆ ನರ್ಸ್ ನೀಡಿದ ಹೇಳಿಕೆಯೇ ಕಾರಣ ಎಂದು ಸಂಬಂಧಿ ದೂರಿದ್ದಾರೆ.

ತನ್ನ ಅಜ್ಜಿ ರಾಧಮ್ಮ ಅವರಿಗೆ ಕೋವಿಡ್ ವರದಿ ಬರುವ ಮುನ್ನವೇ ಕೋವಿಡ್ ರೋಗಿ ಎಂದು ತನ್ನ ಅಜ್ಜಿಯ ಮುಂದೆ ಪಟ್ಟಣದ ಎಂಜಿಎಂ ಆಸ್ಪತ್ರೆಯ ನರ್ಸ್ ಹೇಳಿದ ಕಾರಣದಿಂದಾಗಿ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿ ಗಾಬರಿಗೊಂಡು ಸಂಪೂರ್ಣ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ, ರೋಗಿಗಳನ್ನು  ಭಯಪಡಿಸುವ  ನರ್ಸ್ ವಿರುದ್ಧ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿ ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆ ವೈದ್ಯರು ಸೂಚಿಸಿದ್ದರಿಂದ ಸಿಟಿ ಸ್ಕ್ಯಾನ್ ಮಾಡಿಸಿ ಪುನಃ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಕರ್ತವ್ಯದಲ್ಲಿದ್ದ ನರ್ಸ್ ಪ್ರಭಾ ಎಂಬುವರು ಡಾಕ್ಟರ್ ಮಾನಸ ಅವರು ತನ್ನ ಮೊಬೈಲ್ ಕರೆ ಮಾಡಿ ರಾಧಮ್ಮ ಅವರಿಗೆ ಕೋವಿಡ್ ಲಕ್ಷಣಗಳು ಇದೆ ಅವರನ್ನು ಕೋವಿಡ್ ವಾರ್ಡ್ ಗೆ ವರ್ಗಾಯಿಸಲು ಸೂಚಿಸಿದ್ದಾರೆಂದು  ಅಜ್ಜಿ ರಾಧಮ್ಮ ಅವರ ಮುಂದೆ ಹಾಗೂ ಎಲ್ಲಾ ರೋಗಿಗಳ ಎದುರು ಕೂಗಿ ಹೇಳಿದ್ದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿ ನಂತರ  ಚಿಕ್ಕಮಗಳೂರು ಆಸ್ಪತ್ರೆಗೆ ಕರೆದೊಯ್ಯುವಾಗ  ರಾದಮ್ಮ ಮೃತ ಪಟ್ಟಿದ್ದಾರೆ ಎಂದು ದೂರಿದ್ದಾರೆ.

ಅಜ್ಜಿಯ ಕೋವಿಡ್ ವರದಿ ನೆಗೆಟಿವ್ ಬಂದಿದ್ದರೂ ನರ್ಸ್ ಪ್ರಬಾ ಅವರು ರೋಗಿಯ ಮುಂದೆ ಹೇಳಿ ರೋಗಿಯನ್ನು ಭಯಗೊಳಿಸಿರುವ ಬಗ್ಗೆ ಎಂ.ಜಿ.ಎಂ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಾಂಭವಿ  ಹತ್ತಿರ ಹೇಳಿಕೊಂಡಾಗ ಡಾ.ಮಾನಸ ಹಾಗೂ ನರ್ಸ್ ಪ್ರಭಾ ಇಬ್ಬರನ್ನೂ ಕರೆಸಿ ವಿಚಾರಿಸಿದ್ದಾರೆ. ಆಗ ಡಾಕ್ಟರ್ ಮಾನಸ ಅವರು ರೋಗಿಗೆ ಕೋವಿಡ್ ಲಕ್ಷಣ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಕೋವಿಡ್ ವಾರ್ಡ್ ಗೆ ವರ್ಗಾಯಿಸಲು ತಿಳಿಸಿದ್ದೆ ಎಂದರು. ಆದರೆ ದೃಢಪಟ್ಟಿದೆ ಎಂದು ಹೇಳಿರಲಿಲ್ಲ ಎಂದು ವೈದ್ಯೆ ಸ್ಪಷ್ಟಪಡಿಸಿದ್ದಾರೆ. 

ರೋಗಿಗೆ ಭಯಗೊಳಿಸಿದ ನರ್ಸ್ ಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿ ತಪ್ಪಿತಸ್ಥ ನರ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು  ಇಂತಹ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಮೃತರ ಸಂಬಂಧಿ ಆಗ್ರಹಿಸಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.