ಚಿಕ್ಕಮಗಳೂರು : ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದ ಸ್ವಚ್ಛತೆಯ ಕಡೆಗೆ ಪ್ರವಾಸಿಗರು ಹಾಗೂ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಗೌರಿಗದ್ದೆಯ ಅವಧುತ ವಿನಯ್ ಗುರೂಜಿ ತಿಳಿಸಿದರು.

ದತ್ತಪೀಠದ ಗಿರಿಶ್ರೇಣಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಇಳಿದ ಅವರು ಸರ್ವರ ಸಹಕಾರದೊಂದಿಗೆ ಗಿರಿ ಶ್ರೇಣಿಯನ್ನು ಸ್ವಚ್ಛಗೊಳಿಸಿದರು ಹಾಗೂ ಅಲ್ಲಿನ ಶೌಚಾಲಯವನ್ನು ಶುಚಿಗೊಳಿಸಿದರು. ನಂತರ ಇಲ್ಲಿನ ಕುರಿತಾಗಿ ಗಮನಹರಿಸುವಂತೆ ಸರ್ಕಾರವನ್ನು ಮನವಿ ಮಾಡಿದ ಅವರು ರಜಾದಿನಗಳಲ್ಲಿ 2000ಕ್ಕೂ ಅಧಿಕ ವಾಹನಗಳಲ್ಲಿ ದತ್ತಪೀಠಕ್ಕೆ ಪ್ರವಾಸಿಗರು ಆಗಮಿಸುತ್ತಾರೆ, ಹಣವಂತರು ಉಳ್ಳವರು ರೆಸಾರ್ಟ್ಗಳಲ್ಲಿ ಉಳಿಯುತ್ತಾರೆ  ಬಡವರು ಏನು ಮಾಡಬೇಕು, ಅವರಲ್ಲಿ ರೆಸಾರ್ಟ್ನಲ್ಲಿ ತಂಗಲು ಬಹಳ ದೊಡ್ಡ ಮೊತ್ತದ ಹಣ ಇರುವುದಿಲ್ಲ ಆದಕಾರಣ ಒಬ್ಬ ಸಾಮಾನ್ಯನಾಗಿ ನಾನು ಸರ್ಕಾರವನ್ನು ಅಗತ್ಯ ಕ್ರಮಗಳನ್ನು ಒದಗಿಸಿಕೊಡುವಂತೆ ಮನವಿ ಮಾಡುತ್ತಿದ್ದೇನೆ ಎಂದರು.

ಇಲ್ಲಿ ಹೆಚ್ಚಿನದಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಟ್ಟಲ್ಲಿ ಬಹಳಷ್ಟು ಜನರಿಗೆ ಅನುಕೂಲವಾಗುತ್ತದೆ, ಈ ಕುರಿತಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಖುದ್ದಾಗಿ ನಾನೇ ಪತ್ರ ಬರೆಯುತ್ತೇನೆ ಎಂದರು. ಇದರೊಂದಿಗೆ ದತ್ತಪೀಠದ ಪ್ರಾಧಿಕಾರವು ಕೂಡ ಈ ಕುರಿತು ಗಮನ ಹರಿಸಿ ಇದರ ಅಭಿವೃದ್ಧಿಪಡಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎಂದರು.

ಎಲ್ಲರೂ ಕೂಡ ಸ್ವಚ್ಛತೆಯೆಡೆಗೆ ಗಮನಹರಿಸಿದರೆ ಮುಂಬರುವ ದಿನಗಳಲ್ಲಿ ರೋಗರುಜಿನಗಳಿಂದ ಪಾರಾಗಬಹುದು ಎಂದರು. ಈ ಸ್ವಚ್ಛತಾ ಆಂದೋಲನದಲ್ಲಿ ನೆಹರು ಯುವ ಕೇಂದ್ರ, ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ಸ್ವಚ್ಛತಾ ಆಂದೋಲನವನ್ನು ಯಶಸ್ವಿಗೊಳಿಸಿದರು.

ತನು ಕೊಟ್ಟಿಗೆಹಾರ, ವರದಿಗಾರರು