ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಕೊಡಗಿನಿಂದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದ ಸುಜಾ ಕುಶಾಲಪ್ಪ ಅವರು ವಿಜಯವನ್ನು ಸಾಧಿಸಿದ್ದಾರೆ. 

ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದಿಂದ ಮಂಥರ್ ಗೌಡ ಅವರು ಸ್ಪರ್ಧೆ ನಡೆಸಿದ್ದರು. ಆದರೆ 102 ಮತಗಳ ಅಂತರದಿಂದ ಬಿಜೆಪಿಯ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ಜಯ ಸಾಧಿಸಿದ್ದಾರೆ.

ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟ್ ನಲ್ಲಿ ನಡೆದ ಈ ಚುನಾವಣೆಯ ಮತಎಣಿಕೆಯು ಅತ್ಯಂತ ವೇಗವಾಗಿ ಮುಗಿದಿದೆ. ಸುಜಾ ಕುಶಾಲಪ್ಪ ಅವರು 705 ಮತಗಳನ್ನು ಪಡೆದರೆ ಕಾಂಗ್ರೆಸ್ ನ ಮಂಥರ್ ಗೌಡ ಅವರು 603 ಮತಗಳನ್ನು ಪಡೆದಿದ್ದಾರೆ. ಉಳಿದ 17 ಮತಗಳು ಅನರ್ಹವಾಗಿದೆ.

ಬಿಜೆಪಿಯ ಭದ್ರ ಕೋಟೆ ಕೊಡಗು ವಿಜಯದ ಮೂಲಕ ಮತ್ತೊಮ್ಮೆ ಕೋಟೆಯನ್ನು ಬಲಿಷ್ಟಗೊಳಿಸಿಕೊಂಡಿದೆ. ಕೊಡಗಿನ ಶಾಸಕ ಕೆಜಿ ಬೋಪಯ್ಯ ಸೇರಿದಂತೆ ಬಿಜೆಪಿಯ ಅನೇಕರು ಸುಜಾ ಕುಶಾಲಪ್ಪ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.  ಸುಜಾ ಕುಶಾಲಪ್ಪ ಅವರ ಬೆಂಬಲಿಗರ ಮನದಲ್ಲಿ ಈ ಗೆಲುವು ಹರ್ಷ ತಂದಿದೆ.