ಶೃಂಗೇರಿ : ನ್ಯೂಸ್ ಮಲ್ನಾಡ್ ಡಿಜಿಟಲ್ ಮೀಡಿಯಾ ಆಯೋಜಿಸಿದ ‘ಜಂಗಲ್ ವಾರಿಯರ್’ ಕಾರ್ಯಕ್ರಮ ಪಟ್ಟಣದ ಖಾಸಗಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೆರಿಕೋಸ್ ವೇಯ್ನ್ ತಜ್ಞ ಡಾ. ಉರಾಳ್, ದೇಶ ಸೇವೆ ಮಾಡುವ ಸೈನಿಕ ದಂಪತಿಗಳು ನಮ್ಮ  ಶೃಂಗೇರಿಯಲ್ಲಿರುವುದು ಊರಿನ ಹೆಮ್ಮೆಯೇ ಸರಿ. ಯುವಕರು ಕೂಡ ದೇಶಸೇವೆಗೆ ಮುಂದೆ ಬರಬೇಕು ಎಂದರು.

ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಅಸಿಸ್ಟೆಂಟ್ ಕಮಾಂಡೆಂಟ್ ನಿತೀಶ್ ನಾಗೇಂದ್ರ, ಬಾಲ್ಯದಿಂದಲೇ ವಿದ್ಯಾರ್ಥಿಗಳು ದೇಶಪ್ರೇಮದ ಕಡೆಗೆ ಒಲವು ತೋರಬೇಕು, ರಾಷ್ಟ್ರದ ಹಿತಕ್ಕಾಗಿ ದುಡಿಯುವ ಮನಸ್ಸನ್ನು ಯುವಕರು ಮೈಗೂಡಿಸಿಕೊಂಡಾಗ ಮಾತ್ರ ದೇಶವು ಬಲಿಷ್ಠವಾಗಿ ಹಾಗೂ ಸದೃಢವಾಗಿರಲು ಸಾಧ್ಯ. ಸಣ್ಣ ವಯಸ್ಸಿನಿಂದಲೇ ಸೇನೆಗೆ ಸೇರುವ ಇಚ್ಚೆಯುಳ್ಳವರು ನಿಯಮಿತವಾಗಿ ಓದುತ್ತಾ ಸೇನೆಯ ಕುರಿತಾದ ಹೆಚ್ಚಿನ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳುತ್ತಾ ಮುಂದೆ ಸಾಗಬೇಕು. ದೈಹಿಕವಾಗಿ ಮತ್ತು ಮಾನಸಿಕವಾಗಿ ಎಲ್ಲಾ ವಿಷಯಗಳಲ್ಲೂ ಸಿದ್ಧರಿರಬೇಕು. ಏಕಾಗ್ರತೆಯೆಡೆಗೆ ಹೆಚ್ಚಿನ ಒಲವನ್ನು ತೋರಿದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ ಸದೃಢ ಹಾಗೂ ಬಲಿಷ್ಠ ಭಾರತದ ಭದ್ರಬುನಾದಿಯಾಗಿ ಯುವಕರು ಮಾರ್ಪಾಡಾಗಬೇಕು. ರಾಷ್ಟ್ರದ ಉನ್ನತಿಗಾಗಿ ಸದಾ ಶ್ರಮಿಸುವ ಮನಸ್ಸನ್ನು ಯುವಕರು ಹೊಂದಬೇಕು ಎಂದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಅಸಿಸ್ಟೆಂಟ್ ಕಮಾಂಡೆಂಟ್ ದೀಪಾಲಿ, ಸೇನೆಗೆ ಸೇರುವಲ್ಲಿ ಯುವತಿಯರು ಹೆಚ್ಚಿನದಾಗಿ ಮನಸ್ಸು ಮಾಡಬೇಕು, CRPF ಸೇರಿದಂತೆ ಮಹಿಳೆಯರಿಗೆ ದೇಶ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶಗಳಿವೆ, ಅದನ್ನು ಉಪಯೋಗಿಸಿಕೊಂಡು ಮುಂದೆ ಬರಬೇಕು ಎಂದರು. ಪತಿ-ಪತ್ನಿ ಇಬ್ಬರೂ ಸೇನಾ ಸಮವಸ್ತ್ರದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ಆಕರ್ಶಿಸುವಂತೆ ಮಾಡಿತು.

ಬಳಿಕ ವೀರ ಯೋಧರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. CRPF ನಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕ ಜೋಡಿಗೆ ಸನ್ಮಾನ ಮಾಡುವುದರ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೆ.ಸಿ.ಬಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಸ್ವಾಮಿ, ವೆರಿಕೋಸ್ ವೇಯ್ನ್ ತಜ್ಞ ಡಾ. ಉರಾಳ್ NCC ಅಧಿಕಾರಿಗಳಾದ ಲೆಫ್ಟಿನೆಂಟ್ ಡಾ. ಕುಮಾರಸ್ವಾಮಿ ಉಡುಪ, ಕಾಲೇಜಿನ ಅಧ್ಯಾಪಕರಾದ ರೇಖಾ ಹಾಗೂ ನ್ಯೂಸ್ ಮಲ್ನಾಡ್ ಮುಖ್ಯಸ್ಥರು ಉಪಸ್ಥಿತರಿದ್ದರು.

ಅಸಿಸ್ಟೆಂಟ್ ಕಮಾಂಡೆಂಟ್ ನಿತೀಶ್ ನಾಗೇಂದ್ರ ಹಾಗೂ ದೀಪಾಲಿ ಅವರ ಕುರಿತು

ನಿತೀಶ್ ಮೂಲತಃ ಚಿಕ್ಕಮಗಳೂರಿನ ಶೃಂಗೇರಿಯವರು. ತಂದೆ ನಾಗೇಂದ್ರ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ASI ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶೃಂಗೇರಿಯ ಜೇಸೀಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು, ನಂತರ ಇಂಜಿನಿಯರಿಂಗ್ ಸೇರ್ಪಡೆಯಾದರು. ಆ ಬಳಿಕ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿಆರ್ ಪಿಎಫ್ ನ 2017 ನೇ ಬ್ಯಾಚ್ ನ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದಾರೆ. ಪ್ರಸ್ತುತ ಚತ್ತಿಸ್ ಘಡದ CRPFನ ಕೋಬ್ರಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಿತೀಶ್ ಅವರ ಪತ್ನಿ ದೀಪಾಲಿ ಮೂಲತಃ ದೆಹಲಿಯವರು. ಇವರ ತಾಯಿ ದೆಹಲಿ ಪೊಲೀಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2017 ನೇ ಬ್ಯಾಚ್ ನ CRPF ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಹೊರಹೊಮ್ಮಿದ ದೀಪಾಲಿ ಪ್ರಸ್ತುತ ಚತ್ತಿಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಂದೆಯಿಂದ ಸ್ಪೂರ್ತಿ

ಸದೃಢ ದೇಹ, ಕಣ್ಣಂಚಿನಲ್ಲಿ ಅತ್ಮವಿಶ್ವಾಸ, ಯೂನಿಫಾರ್ಮ್ ನಲ್ಲಿ ಖಡಕ್ ಆಗಿರುವ ನಿತೀಶ್ ಗೆ ತನ್ನ ತಂದೆಯೇ ಸ್ಪೂರ್ತಿಯಂತೆ. ಚಿಕ್ಕಂದಿನಿಂದಲೂ ತಂದೆಯನ್ನು ಪೊಲೀಸ್ ಯೂನಿಫಾರ್ಮ್ ನಲ್ಲಿ ನೋಡುತ್ತಿದ್ದಾಗ ನಾನೂ ಹೀಗಾಗಬೇಕು ಎಂದುಕೊಂಡಿದ್ದೆ, ಅವರು ಹಾಕಿಕೊಟ್ಟ ಮಾರ್ಗ, ಸದಾ ಬೆನ್ನು ತಟ್ಟಿ, ನನಗೆ ತುಂಬಿದ ಆತ್ಮವಿಶ್ವಾಸವೇ ಇಂದು ನನ್ನ ಸಾಧನೆಗೆ ಸ್ಪೂರ್ತಿ ಎನ್ನುತ್ತಾರೆ ನಿತೀಶ್.

ನಿತೀಶ್ ಅವರ ತಂದೆ ನಾಗೇಂದ್ರ ಶೃಂಗೇರಿ ಠಾಣೆಯಲ್ಲಿ ASI ಆಗಿ ಸೇವೆ ಸಲ್ಲಿಸಿದ ಬಳಿಕ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ತನ್ನ ಮಗನ ಸಾಧನೆಗೆ ಹೆಮ್ಮೆ ಒಂದೆಡೆಯಾದರೆ ತನ್ನ ಸೊಸೆಯೂ CRPFನ ಅಧಿಕಾರಿ ಎನ್ನುವ ಹೆಮ್ಮೆ ಇನ್ನೊಂದೆಡೆ. ಒಟ್ಟಿನಲ್ಲಿ ಇಂತಹ ಸೈನಿಕ ಜೋಡಿ ನಮ್ಮ ಮಲೆನಾಡಿನವರೂ ಎನ್ನುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.

ಕೋಬ್ರಾ ಪಡೆಯ ವಿಶೇಷತೆ ಏನು?

ಕೋಬ್ರಾ CRPF ನ ವಿಶೇಷ ಪಡೆ. ಚತ್ತಿಸ್ ಘಡ ಸೇರಿದಂತೆ ಭಾರತದ ಈಶಾನ್ಯ ರಾಜ್ಯದಲ್ಲಿ ಹೆಚ್ಚಾಗಿರುವ ನಕ್ಸಲರನ್ನು ಮಟ್ಟ ಹಾಕಲು 2008ರಲ್ಲಿ ಈ CoBRA ಪಡೆಯನ್ನು ಪ್ರಾರಂಭಿಸಲಾಯಿತು. ಗೆರಿಲ್ಲಾ ದಾಳಿಗೆ ಕೋಬ್ರಾ ಪಡೆ ಹೆಸರುವಾಸಿ. ‘ಜಂಗಲ್ ವಾರಿಯರ್ಸ್’ ಎಂದೇ ಕರೆಸಿಕೊಳ್ಳುವ ಇವರು ಅನ್ನ, ನೀರು ಇಲ್ಲದೆ ದಟ್ಟ ಕಾಡಿನಲ್ಲಿ ಎರಡು ವಾರ ಸರ್ವೈವ್ ಆಗಬಲ್ಲರು. ಮೂರು ತಿಂಗಳ ಅತ್ಯಂತ ಕಠಿಣ ತರಬೇತಿ ಬಳಿಕ ಕಮಾಂಡೋಗಳನ್ನು ಆಯ್ಕೆ ಮಾಡಲಾಗುತ್ತದೆ. ಕೋಬ್ರಾ ಪಡೆ ದೇಶಾದ್ಯಂತ ಈವರೆಗೆ ಸುಮಾರು 398 ನಕ್ಸಲರನ್ನು ಹೊಡೆದುರುಳಿಸಿದೆ.