ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಕಂಪ್ಲೆಂಟ್ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ನರಸಿಂಹರಾಜಪುರ  ಶಾಲೆಯ ದೈಹಿಕ ಶಿಕ್ಷಕನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಭುನಾಯ್ಕ ಎಂಬ ವ್ಯಕ್ತಿಯು ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು, ಘಟನೆಯ ಕುರಿತಾಗಿ ಬಿಇಒ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡುತ್ತಿದ್ದಂತೆಯೇ ಶಿಕ್ಷಕ ತಲೆಮರೆಸಿಕೊಂಡಿದ್ದ, ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು  ಆರೋಪಿಗಾಗಿ ಬಲೆ ಬೀಸಿದ್ದರು.

ಈ ಮಧ್ಯೆ ತನಿಖೆಯ ಸಲುವಾಗಿ ಎಎಸ್ಪಿ ಶೃತಿ ಅವರ ನೇತೃತ್ವದ ತಂಡವೂ ಘಟನೆಯ ಸಂಪೂರ್ಣ ಮಾಹಿತಿ ಕಲೆ ಹಾಕುವ ಸಲುವಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರದಲ್ಲಿ ತನಿಖಾ ವರದಿಯನ್ನು ಎಸ್ಪಿ ಅಕ್ಷಯ್ ಎಂ.ಹೆಚ್ ರವರು ಪರಿಶೀಲನೆ ನಡೆಸಿದ್ದರು ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹಾಗೂ ನೊಂದ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದಿದ್ದರು.


ಘಟನೆಯ ಕುರಿತು ಚುರುಕಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳೆದ ಕೆಲ ದಿನಗಳಿಂದ ರಾಜ್ಯ ಹಾಗೂ ಕೆಲ ಹೊರ ರಾಜ್ಯಗಳಲ್ಲೂ ಶಿಕ್ಷಕನಿಗಾಗಿ ಶೋಧ ನಡೆಸಿದ್ದರು ಅಂತೆಯೇ ಖಚಿತ ಮಾಹಿತಿಯನ್ನು ಆಧರಿಸಿ ತರೀಕೆರೆಯಲ್ಲಿ ಆರೋಪಿ ಶಿಕ್ಷನನ್ನು ಬಂಧಿಸಿದ್ದಾರೆ.

ಶಿಕ್ಷಕನ ಮೇಲೆ ಈಗಾಗಲೇ 11 ಕೇಸುಗಳು ದಾಖಲಾಗಿದ್ದು ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಿ ನಂತರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿಗಳನ್ನು ತಿದ್ದಿ ತೀಡುವ ಶಿಕ್ಷಕನೇ ಯಾರೂ ಕ್ಷಮಿಸಲಾರದಂತಹ ತಪ್ಪುಮಾಡಿ ಇದೀಗ ಸಿಕ್ಕಿ ಬಿದ್ದಿರುವುದು ಪೋಷಕವೃಂದ ಹಾಗೂ ಸಾರ್ವಜನಿಕರನ್ನು ಆಕ್ರೋಶಕ್ಕೀಡುಮಾಡಿದೆ. ಆರೋಪಿಗೆ ಕಠಿಣ ಕಾನೂನು ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.