ಚಿಕ್ಕಮಗಳೂರು : ಪ್ರಕೃತಿಯ ಸೊಬಗಿನ ನಾಡಾದ ಕಾಫಿನಾಡು ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಭೀಕರ ಅಗ್ನಿ ಅವಘಡ ಉಂಟಾಗಿದೆ.
ಚಾರ್ಮಾಡಿ ಘಾಟಿ ಸಮೀಪದ ಗುಡ್ಡಕ್ಕೆ ಬೆಂಕಿ ತಗುಲಿದ ಪರಿಣಾಮ ಅಂದಾಜು ಇಪ್ಪತ್ತೈದು ಎಕರೆ ಅರಣ್ಯ ಪ್ರದೇಶವು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಮಲಯಮಾರುತ ಗುಡ್ಡದಲ್ಲಿ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ನಮ್ಮ ಸಿಬ್ಬಂದಿಗಳ ಜೊತೆಗೆ ತೆರಳಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬೇಕೆಂದೇ ಈ ಕೃತ್ಯ ನಡೆಸಿದಂತೆ ಮೇಲ್ನೋಟಕ್ಕೆ ಕಾಣುತ್ತದೆ ಮುಂದಿನ ದಿನಗಳಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ದೊರೆಯಲಿದೆ - ಮೋಹನ್ ಕುಮಾರ್ ಮೂಡಿಗೆರೆ ವಲಯ ಅರಣ್ಯ ಸಂರಕ್ಷಣಾಧಿಕಾರಿ
ಮಲೆನಾಡಿನಲ್ಲಿ ಕೆಲ ತಿಂಗಳುಗಳ ಕಾಲ ಸುರಿದ ಮಳೆಯು ಸಂಪೂರ್ಣವಾಗಿ ರೈತಾಪಿ ವರ್ಗದ ಜನರ ಬದುಕನ್ನು ದುಸ್ತರ ವನ್ನಾಗಿಸಿತ್ತು ಪ್ರಸ್ತುತ ಚಳಿಯು ಹೆಚ್ಚಿದ್ದರೆ ಬಿಸಿಲು ಕೂಡ ತನ್ನ ತೀವ್ರತೆಗೆ ಹಸಿರನ್ನು ಒಣಗಿಸಲು ಆರಂಭಿಸಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಮಲಯಮಾರುತ ವ್ಯೂ ಪಾಯಿಂಟ್ ಸಮೀಪದಲ್ಲಿ ಯಾರೋ ಪ್ರವಾಸಿಗರು ಸಿಗರೇಟ್ ಸೇದಿ ಬಿಸಾಕಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕಿಸಿದ್ದಾರೆ. ಈ ಕುರಿತು ಮುಂಬರುವ ದಿನಗಳಲ್ಲಿ ಘಟನೆಗೆ ಸಂಪೂರ್ಣ ಕಾರಣ ಏನಿರಬಹುದು ಎಂದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.
ಅನೇಕ ವಿಧದ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿರುವ ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶವು ಅನೇಕರನ್ನು ಕೈ ಬೀಸಿ ಕರೆಯುತ್ತದೆ. ಸಾವಿರಾರು ಎಕರೆ ವಿಸ್ತಾರವಾದ ಈ ಅರಣ್ಯ ಪ್ರದೇಶಕ್ಕೆ ವಿಷಯ ತಿಳಿದ ಕೂಡಲೇ ಅಧಿಕಾರಿಗಳು ದೌಡಾಯಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ ಈ ಅಗ್ನಿ ಅವಘಡದ ತುರ್ತು ಪರಿಸ್ಥಿತಿಯಲ್ಲಿ ಬೆಂಕಿ ನಂದಿಸಲು ಅರಣ್ಯ ಇಲಾಖೆಯ ರೇಂಜರ್ ಮೋಹನ್ ಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments