ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಜಾನುವಾರುಗಳನ್ನು ಲಾರಿಯೊಳಗಡೆ ತುಂಬಿ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ಸಂಪಾಜೆ ಅರಣ್ಯ ಚೆಕ್ ಪೋಸ್ಟ್ ಬಳಿ ಬಂದಿದ್ದ ಈಚರ್ ಲಾರಿಯನ್ನು ಪೊಲೀಸರು ತಪಾಸಣೆ ನಡೆಸುವ ವೇಳೆ ವಾಹನವು ಅನುಮಾನಾಸ್ಪದವಾಗಿ ಕಂಡ ಕಾರಣ ಕೂಡಲೇ ಅಲ್ಲಿನ ಸಿಬ್ಬಂದಿಗಳು ಸಂಪೂರ್ಣ ತಪಾಸಣೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಎಟಿಎಂ ನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಹಣ ಎಗರಿಸಿದ್ದ ಖತರ್ನಾಕ್ ಕಳ್ಳನ ಬಂಧನ
ವಾಹನವನ್ನು ಹಿಂಬದಿಯಿಂದ ಕಾಫಿ ತುಂಬಿದ್ದ ಚೀಲಗಳಿಂದ ಬಂದ್ ಮಾಡಲಾಗಿತ್ತು, ವಾಹನದ ಮೇಲ್ಭಾಗವನ್ನು ಕೂಡ ಕಾಫಿಚೀಲಗಳಿಂದ ಮುಚ್ಚಲಾಗಿತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚೀಲವನ್ನು ತೆರವುಗೊಳಿಸಿದಾಗ ಒಳಗಡೆ ಹಸುಗಳನ್ನು ತುಂಬಿ ಸಾಗಾಟ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಅಧಿಕಾರಿಗಳು ತಪಾಸಣೆಗೆ ಮುಂದಾಗುತ್ತಿದ್ದಂತೆ ಲಾರಿಯಲ್ಲಿದ್ದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಈ ವಾಹನವು ಮಡಿಕೇರಿಯಿಂದ ಸುಳ್ಯದ ಕಡೆಗೆ ತೆರಳುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ವಾಹನದಲ್ಲಿ ಒಟ್ಟು 24 ಜಾನುವಾರುಗಳನ್ನು ತುಂಬಿ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಗೋಹತ್ಯಾ ನಿಷೇಧ ಕಾಯ್ದೆ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಕಾನೂನಿನ ಅಡಿಯಲ್ಲಿ ವಿಧಿಸಲಾಗುವ ಅತ್ಯಂತ ಕಠಿಣ ಕ್ರಮಗಳನ್ನು ಈ ಅಕ್ರಮ ಸಾಗಾಟಗಾರರ ಮೇಲೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

0 Comments