ಶೃಂಗೇರಿ ಹಕ್ಕುಪತ್ರ ಹಗರಣ ಸಂಬಂಧ ಹಲವು ತಿರುವುಗಳು ಬೆಳವಣಿಗೆ ಕಂಡಿವೆ, ಎಸಿಬಿ ದಾಳಿಯ ಸಮಯದಲ್ಲಿ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗ ಸಿದ್ದಪ್ಪನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿತ್ತು, ಆ ನಂತರ ತಹಸೀಲ್ದಾರ್ ರನ್ನು ವಿಚಾರಣೆ ಮಾಡಿ ಅವರನ್ನೂ ಬಂಧಿಸಿತ್ತು. ಪ್ರಕರಣದಲ್ಲಿ ತಹಸೀಲ್ದಾರ್ ಅಂಬುಜಾ ಎ1 ಆರೋಪಿಯಾಗಿ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಎ2 ಆರೋಪಿಗಳಾಗಿ ಜೈಲು ಸೇರಿದ್ದರು.

ಆದರೆ ತಹಸೀಲ್ದಾರ್ ಬಂಧನವಾಗುತ್ತಿದ್ದಂತೆಯೇ ಹಲವು ಬೆಳವಣಿಗೆಗಳು ಕಂಡು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿತ್ತು.

ಶೃಂಗೇರಿ ಹಕ್ಕುಪತ್ರ ಹಗರಣದ ನಂತರದ ಹಲವು ತಿರುವುಗಳು.

ತಹಸೀಲ್ದಾರ್ ಪರ ಪ್ರತಿಭಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ : 

ತಹಶೀಲ್ದಾರ್ ಪರವಾಗಿ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ, ಯಾವುದರಲ್ಲೂ ಇಲ್ಲದ ಒಗ್ಗಟ್ಟು ಇದರಲ್ಲಿ ಹೇಗೆ,


ಇದೇ ಒಗ್ಗಟ್ಟನ್ನು ಪ್ರಾಮಾಣಿಕ ಅಧಿಕಾರಿಗಳ ಪರವಾಗಿ ತೋರಿಸಿಲ್ಲ ಏಕೆ, ಈ ಹಿಂದೆ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರನ್ನು ಸೇವೆಯಿಂದ ವಜಾ ಮಾಡಿದಾಗ ಹಾಗೂ ಆಸ್ಪತ್ರೆಯ ವಿಚಾರಕ್ಕೆ ಯಾಕೆ ಯಾರೂ ಪ್ರಶ್ನೆ ಎತ್ತಿಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಜನರು ಕೇಳಲಾರಂಭಿಸಿದ್ದಾರೆ.



ಇನ್ನು ಹಕ್ಕುಪತ್ರ ಮಾಡಿಕೊಡುವುದಾಗಿ ಬಡವರಿಂದ ದುಪ್ಪಟ್ಟು ಹಣ ಪಡೆದಿರುವ ಕಮಿಷನ್ ಏಜೆಂಟರಿಗೆ ಜನರು "ಹೆಣ ಅಗೆದು ತಿನ್ನುವ ಜಾಯಮಾನದವರು" ಎಂದು ಛೀಮಾರಿ ಹಾಕುತ್ತಿದ್ದಾರೆ.

ರಾಜಕೀಯ ಪಕ್ಷಗಳ ಒಳಗೆ ಆಂತರಿಕ ಭಿನ್ನಮತ;

ರಾಜಕೀಯ ಪಕ್ಷಗಳ ಒಳಗೆಯೇ ಅಸಮಾಧಾನ ವ್ಯಕ್ತವಾಗುತ್ತಿದ್ದು ತಮ್ಮದೇ ಮುಖಂಡರ ಕೆಲಸಕ್ಕೆ ಒಳಗೊಳಗೇ ವಿರೋಧ ವ್ಯಕ್ತವಾಗುತ್ತಿದೆ. ಹೀಗಾದರೆ ಮುಂದಿನ ಚುನಾವಣೆಗಳಲ್ಲಿ ಜನರೆದುರು ಹೇಗೆ ಮುಖ ತೋರಿಸಿ ಓಟು ಕೇಳುವುದು ಎಂಬುದು ಹಲವರ ಪ್ರಶ್ನೆಯಾಗಿದೆ.

ದಿಕ್ಕು ತಪ್ಪಿದ ಸರ್ವಪಕ್ಷಗಳ ಒಗ್ಗಟ್ಟು!

ತಹಸೀಲ್ದಾರ್ ಬಂಧನವಾಗುತ್ತಿದ್ದಂತೆಯೇ ಬಿಡುಗಡೆಗೆ ಒತ್ತಾಯಿಸಿದ್ದ ಸರ್ವ ಪಕ್ಷಗಳ ಸ್ಥಳೀಯ ಮುಖಂಡರು ದಿನ ಕಳೆದಂತೆ ವಿವಾದದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

ಮೊದಲಿಗೆ ಜೆಡಿಎಸ್ ಪಕ್ಷದ ಮುಖಂಡರು ತಾಲೂಕು ಕಛೇರಿ ಎದುರಿನ ಪ್ರತಿಭಟನೆಯಲ್ಲಿ ಭಾಗವಹಿಸದಿರುವ ಕುರಿತು ತೀರ್ಮಾನ ಮಾಡಿದ್ದು, ಹಾಗೆಯೇ ಹಗರಣವು ಶೃಂಗೇರಿ ಗೆ ಕಪ್ಟುಚುಕ್ಕಿಯಾಗಿದ್ದು ಸಮಗ್ರ ತನಿಖೆಗೆ ಒತ್ತಾಯಿಸಿತ್ತು. ಆ ನಂತರ ನಿಧಾನಕ್ಕೆ ಹೋರಾಟದಿಂದ ಜಾರಿಕೊಂಡ ಕಾಂಗ್ರೆಸ್ ತಮಗೂ ಈ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ, ನಾವು ಹಣ ನೀಡಿ ಯಾವುದೇ ಹಕ್ಕುಪತ್ರ ಮಾಡಿಸಿಲ್ಲ ಹಾಗೂ ನಮ್ಮ ಪಕ್ಷ ಈ ಅಕ್ರಮಕ್ಕೆ ಬೆಂಬಲವಾಗಿ ನಿಲ್ಲುವುದಿಲ್ಲ ಎಂದಿದೆ.

ಆರಂಭದಲ್ಲಿ ಇದು ಸರ್ವ ಪಕ್ಷಗಳ ಒಗ್ಗಟ್ಟಿನ ನಿರ್ಧಾರ ಎಂದು ತಾಲೂಕು ಕಛೇರಿ ಎದುರು ಸೇರಿದವರಲ್ಲಿ ಎರಡು ಪ್ರಮುಖ ಪಕ್ಷಗಳು ಹಗರಣದ ಹೋರಾಟದಿಂದ ದೂರ ಸರಿದಿದ್ದು, ಇರುವ ಮೂವರಲ್ಲಿ ಬಿಟ್ಟವರಾರು ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಟೀಕಾಪ್ರಹಾರ ಪ್ರಾರಂಭವಾಗಿದೆ.


ಟ್ರೈನ್ ಹೋಗುವುದನ್ನು ನೋಡಿಯೂ, ಹೋದಮೇಲೆ ಟಿಕೆಟ್ ತೆಗೆದುಕೊಳ್ಳುತ್ತಿರುವ ಜಿಲ್ಲಾಡಳಿತ:

ಶೃಂಗೇರಿಯಲ್ಲಿ‌ ಹಕ್ಕುಪತ್ರ ವ್ಯವಹಾರ ಪೂರ್ತಿ ಶೃಂಗೇರಿ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಸುದ್ಧಿಯಲ್ಲಿತ್ತು, ಕೆಲವು ಪತ್ರಿಕೆಗಳಲ್ಲಿ ಹಾಗೂ ವೆಬ್ ಪೋರ್ಟಲ್ ಗಳಲ್ಲಿ ಸಹ ಸುದ್ದಿ ಬಿತ್ತರಿಸಲಾಗಿತ್ತು. ಹಾಗೆಯೇ ನಕಲಿ ಹಕ್ಕುಪತ್ರದ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಶೃಂಗೇರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರನ್ನು ಸಹ ನೀಡಿದ್ದರು. ಆ ದೂರಿನ ನಂತರ ಕಡತ ಪರಿಶೀಲನೆಗೆ ತಾಲೂಕು ಕಛೇರಿಗೆ ಭೇಟಿ ನೀಡುವುದಾಗಿ ತಿಳಿಸಿದ್ದ ಡಿಸಿ, ಹಾಗೂ ಎಸಿ ಆ ದಿನ ತಾಲೂಕು ಕಛೇರಿಗೆ ಭೇಟಿ ನೀಡದೇ ಶೃಂಗೇರಿ ಇಂದ ವಾಪಾಸು ತೆರಳಿದ್ದರು. ಮೇಲ್ನೋಟಕ್ಕೆ ನೋಡಿದಾಗ ಇದು ಮೇಲಧಿಕಾರಿಗಳಿಗೂ ಸಂಪೂರ್ಣ ಮಾಹಿತಿ ಇದ್ದಿತು, ಆದರೆ ಒತ್ತಡಕ್ಕೆ ಮಣಿದು ಸುಮ್ಮನಿದ್ದರು. ಆದರೆ ಈಗ ಟ್ರೈನ್ ಹೋದಮೇಲೆ ಟಿಕೆಟ್ ತೆಗೆದುಕೊಳ್ಳುವವರಂತೆ ನಡೆದುಕೊಳ್ಳುತ್ತಿದ್ದಾರೆ ಅಷ್ಟೇ.

ಆರೋಪಿ ಅಂಬುಜಾಗೆ ಜಾಮೀನು ಸಿಕ್ಕಿತೇ?

ಆರೋಪಿ ಅಂಬುಜಾ ಹಾಗೂ ಸಿದ್ದಪ್ಪಗೆ ನ್ಯಾಯಾಲಯವು ಜಾಮೀನು ನೀಡಿದ್ದು, ಸಧ್ಯ ಜೈಲುವಾಸದಿಂದ ಬಿಡುಗಡೆ ಭಾಗ್ಯ ದೊರೆತಿದೆ.

ಅವಧೂತರ ಮೊರೆ ಹೋದ ಬಿಜೆಪಿ ಮುಖಂಡರು? 

ಇಷ್ಟೆಲ್ಲಾ ಆಗುತ್ತಿದ್ದಂತೆ ಸ್ಥಳೀಯ ಬಿಜೆಪಿ ಮುಖಂಡರು ನೆನ್ನೆಯ ದಿನ ಅವಧೂತ ಗುರೂಜಿಯೋರ್ವರ ಆಶ್ರಮಕ್ಕೆ ಭೇಟಿ ನೀಡಿದ್ದು, ಬಹಳಷ್ಟು ಬಡವರಿಗೆ ಹಕ್ಕುಪತ್ರ ನೀಡಿದ್ದು, ರದ್ದಾದಲ್ಲಿ ಅದರಿಂದ ತೊಂದರೆಯಾಗುತ್ತದೆ ಎಂದು, ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಡುವಂತೆ ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.