ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕೆಲ ದಿನಗಳ ಹಿಂದೆ ಮುಗಿದ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಜನತಾದಳ ಪಕ್ಷ ಒಳಗೊಂಡಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮತದಾರರಿಗೆ ಹಣ, ಮದ್ಯದ ಆಸೆ, ಆಮಿಷಗಳ ಮೂಲಕ ಮತದಾರರನ್ನು ಸೆಳೆದಿದೆ ಹಾಗೂ ನಿಗದಿಪಡಿಸಿದ ಚುನಾವಣಾ ಖರ್ಚಿಗಿಂತ ದುಪ್ಪಟ್ಟು ಹಣವನ್ನು ಚುನಾವಣೆಗಾಗಿ ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಆಮ್ ಆದ್ಮಿ ಆರೋಪಿಸಿದೆ.

ಜನರನ್ನು ಅಭಿವೃದ್ದಿಯ ಹೆಸರಿನಲ್ಲಿ ಮತದಾನಕ್ಕೆ ಪ್ರೇರೇಪಿಸದೇ ಹಣ, ವಸ್ತುಗಳನ್ನು ನೀಡುವ ಕುರಿತಾಗಿ ಆಮಿಷಒಡ್ಡಿ ಚುನಾವಣೆಯನ್ನು ಎದುರಿಸಿದೆ, ಗೆದ್ದ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಪಕ್ಷದ ವತಿಯಿಂದ ದೂರು ಸಲ್ಲಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಹೇಳಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಇತ್ತೀಚಿಗೆ ನಡೆದ ನಗರಸಭೆ ಚುನಾವಣೆ ಅನೇಕ ಅನ್ಯಾಯ ಅಕ್ರಮಗಳಿಗೆ ಸಾಕ್ಷಿಯಾಗಿದೆ, ಜೆಡಿಎಸ್ ಒಳಗೊಂಡಂತೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿವೆ, ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡಿ ಮತದಾರರನ್ನು ಸೆಳೆಯಲಾಗಿದೆ ಅದರಲ್ಲೂ ಬಿಜೆಪಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿದರು.

ಆಮ್ ಆದ್ಮಿ ಪಕ್ಷದ ವಾರ್ಡ್ ಸಂಖ್ಯೆ 27 ರ ಅಭ್ಯರ್ಥಿ ದೀಪಕ್ ಗೆ ಬಿಜೆಪಿಯ ವಾರ್ಡ್ ನಂಬರ್ 33ರ ಅಭ್ಯರ್ಥಿ ಪೋನ್ ಮೂಲಕ ನಡೆಸಿರುವ ಬಿಜೆಪಿ ಅಕ್ರಮದ ಆಡಿಯೋಗಳು ಬಯಲಿಗೆ ಬಂದಿದ್ದು, ಚುನಾವಣೆಯಲ್ಲಿ ಚುನಾವಣಾ ಖರ್ಚಿಗೆ ನಿಗದಿಪಡಿಸಿದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಅಕ್ರಮಗಳಿಗೆ ವ್ಯಯಿಸಲಾಗಿದೆ. ನಗರಸಭೆಯ ಚುನಾವಣಾ ಅಧಿಕಾರಿಗಳ ಕಣ್ಣಮುಂದೆಯೇ ಹಣ, ಮದ್ಯ ಹಂಚಿಕೆಯಾದರೂ ಯಾವುದೇ ಕ್ರಮಕೈಗೊಳ್ಳದೇ ಕಾವಲುಗಾರರಂತೆ ರಕ್ಷಣೆ ನಿಂತಿದ್ದರು ಎಂದು ದೂರಿದರು.

https://chat.whatsapp.com/I2r7uKjzrF9AlSwMn2xClg


ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಸದಸ್ಯತ್ವವನ್ನು ರದ್ದುಗೊಳಿಸಬೇಕು, ಶಾಸಕ ಸಿ.ಟಿ ರವಿ ಒಳಗೊಂಡಂತೆ ಗೆದ್ದ ಅಭ್ಯರ್ಥಿಗಳ ವಿರುದ್ದ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಈ ಕುರಿತಾಗಿ ಜಿಲ್ಲಾಧಿಕಾರಿ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಪಕ್ಷದಿಂದ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ಸುಂದರಗೌಡ, ಕಾರ್ಯದರ್ಶಿ ಆಂತೋನಿ, ದೀಪಕ್, ಅಫ್ಜಲ್ ಪಾಶಾ ಹಾಗೂ ಇನ್ನಿತರ ಮುಖಂಡರು ಕಾರ್ಯಕರ್ತರು ಹಾಜರಿದ್ದರು.