ಹಾಸನ : (ನ್ಯೂಸ್ ಮಲ್ನಾಡ್ ವರದಿ) ಗುಡಿಸಲಿಗೆ ಬೆಂಕಿ ಬಿದ್ದು ಕುಟುಂಬವೊಂದು ಬೀದಿ ಪಾಲಾದ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಬಡ ಕುಟುಂಬದ ಸದಸ್ಯರು ರಾತ್ರಿ ಗುಡಿಸಲಿನಲ್ಲಿ ಮಲಗಿದ್ದರು ಈ ವೇಳೆ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದೆ. ಈ ವೇಳೆಗೆ ಗುಡಿಸಲಿನ ಒಳಗಿದ್ದ ರಾಧಾ ಎಂಬುವವರ ಕಾಲಿಗೆ ಬೆಂಕಿಯ ಸ್ಪರ್ಷವಾಗಿದೆ ಕೂಡಲೇ ಎಚ್ಚೆತ್ತ ಅವರು ಕುಟುಂಬದ ಸದಸ್ಯರನ್ನು ಎಬ್ಬಿಸಿ ಹೊರ ನಡೆದಿದ್ದಾರೆ.

ಅದೃಷ್ಟವಶಾತ್ ಕುಟುಂಬದ ಸದಸ್ಯರಿಗೆ ಯಾವುದೇ ಅಪಾಯಗಳು ಸಂಭವಿಸಿಲ್ಲ. ಮೊದಲೇ ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬವು ಇದ್ದ ಸೂರನ್ನು ಆಹಾರ ಪದಾರ್ಥ ಹಾಗೂ ಕೂಡಿಟ್ಟಿದ್ದ ಐದು ಸಾವಿರ ರೂಪಾಯಿ ಹಣವನ್ನು ಬೆಂಕಿಯ ಕೆನ್ನಾಲಿಗೆಗೆ ಕಳೆದುಕೊಂಡಿದೆ. 

ಘಟನಾ ಸ್ಥಳಕ್ಕೆ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಶೀಘ್ರವಾಗಿ ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುಟುಂಬಕ್ಕೆ ನೆರವಾಗಬೇಕೆಂದು ಮನೆಯವರು ಮನವಿಮಾಡಿದ್ದಾರೆ.