ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ಸರ್ಕಾರ ಆದೇಶಿಸಿರುವ ನೈಟ್ ಕರ್ಫ್ಯೂಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾದ್ಯಂತ ಪಾಲಿಸಬೇಕಾದ ನಿಯಮಾವಳಿಗಳನ್ನು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಆದೇಶಿಸಿದ್ದಾರೆ.

ಶುಕ್ರವಾರ ರಾತ್ರಿ ಎಂಟು ಗಂಟೆಯಿಂದ ಸೋಮವಾರ ಬೆಳಗ್ಗೆ ಐದು ಗಂಟೆಯ ವರೆಗೆ ಸಾರ್ವಜನಿಕರು ಪಾಲಿಸಬೇಕಾದ ನಿಯಮಾವಳಿಗಳು ಇಂತಿದೆ :

  • ಅಗತ್ಯ ಮತ್ತು ತುರ್ತು ಸೇವೆ ನೀಡುವ ಹಾಗೂ ಕೋವಿಡ್ 19 ನಿಯಂತ್ರಣ ಹಾಗೂ ನಿರ್ವಹಣೆ ಮಾಡುವ ಕರ್ತವ್ಯ ನಿಭಾಯಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಛೇರಿ ಹಾಗೂ ಕಛೇರಿಯ ಸಿಬ್ಬಂದಿಗಳಿಗೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಅನುಮತಿಸಿದ್ದಾರೆ.
  • ಸಾರ್ವಜನಿಕ ಪಾರ್ಕ್ ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಆದೇಶಿಸಿದ್ದಾರೆ.

  • ಮಾಹಿತಿ ತಂತ್ರಜ್ಞಾನ ಆಧಾರಿತ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಹಾಗೂ ಸಂಸ್ಥೆಗೆ ಅನುಮತಿ ನೀಡಲಾಗಿದೆ. ಆಯಾಯ ಸಂಸ್ಥೆ ನೀಡುವ ಗುರುತಿನ ಚೀಟಿಯನ್ನು ಪ್ರತಿಯೊಬ್ಬ ಸಿಬ್ಬಂದಿ ಕಡ್ಡಾಯವಾಗಿ ಹೊಂದಿರಬೇಕು. ಹಾಗೂ ತಪಾಸಣೆಯ ವೇಳೆ ಅದನ್ನು ತೋರಿಸಬೇಕು.

  • ತುರ್ತು ಹಾಗೂ ಅಗತ್ಯ ಸಂದರ್ಭಗಳಲ್ಲಿ ರೋಗಿ ಹಾಗೂ ಅವರ ಆರೈಕೆ ಮಾಡುವವರಿಗೆ ಓಡಾಡಲು ಅನುಮತಿ ದೊರೆತಿದೆ. ಹಾಗೂ ವ್ಯಾಕ್ಸಿನೇಷನ್ ಪಡೆಯುವವರು ಅಗತ್ಯ ದಾಖಲೆಗಳನ್ನು ತೋರಿಸಿ ತೆರಳಬೇಕು.

  • ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳಾದ ದಿನಸಿ, ಹಾಲು, ಹಣ್ಣು, ಮೊಟ್ಟೆ, ಮಾಂಸ, ಮೀನು ತರಕಾರಿ ಆಹಾರದ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಹೋಂ ಡೆಲಿವರಿ ಮಾಡಲು ಎಲ್ಲಾ ಸಮಯದಲ್ಲೂ ಅವಕಾಶ ಕಲ್ಪಿಸಲಾಗಿದೆ. (ಷರತ್ತುಗಳು ಅನ್ವಯ)
  • ರೆಸ್ಟೋರೆಂಟ್ ಹಾಗೂ ಆಹಾರ ಕೇಂದ್ರಗಳಲ್ಲಿ ಕೇವಲ ಪಾರ್ಸಲ್ ಗೆ ಮಾತ್ರ ಅನುಮತಿ ನೀಡಲಾಗಿದೆ. ಅಲ್ಲೇ ತಿನ್ನುವಂತಿಲ್ಲ ಹಾಗೂ ಹೋಂ ಡೆಲಿವರಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

  • ರೈಲು ಹಾಗೂ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ ಸೂಕ್ತ ಟಿಕೆಟ್ ಹಾಗೂ ದಾಖಲೆಗಳನ್ನು ತಪಾಸಣೆ ವೇಳೆ ನೀಡಿ ಸಂಚರಿಸಬಹುದಾಗಿದೆ. 
  • ಮದುವೆ ಸಮಾರಂಭಗಳಲ್ಲಿ ಪ್ರಸ್ತುತ ವಿಧಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಹೊರಾಂಗಣ ಪ್ರದೇಶಗಳಲ್ಲಿ 200 ಜನ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಕೇವಲ 100 ಜನ ಮಾತ್ರ ಸೇರಲು ಅವಕಾಶ ಸೀಮಿತಮಾಡಿದೆ.

  • ಶನಿವಾರ ವೀಕೆಂಡ್ ಕರ್ಫ್ಯೂ ಇರುವ ಕಾರಣ ಅನುದಾನರಹಿತ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಈ ನಿಯಮಾವಳಿಗಳನ್ನು ಉಲ್ಲಂಘಿಸಿ ಯಾರಾದರೂ ನಡೆದುಕೊಂಡಲ್ಲಿ ಸೂಕ್ತ ಕಾನೂನು ಕ್ರಮಗಳ ಜೊತೆಗೆ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿ ಪಡಿಸುವುದಾಗಿ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರು ಆದೇಶ ಹೊರಡಿಸಿದ್ದಾರೆ.