ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮನೆಯ ಸಮೀಪದಲ್ಲಿ ಕೆಲಸ ಮಾಡುವಾಗ ಮಹಿಳೆಗೆ ಹಾವು ಕಡಿದು ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಸಾಲುಮರ ಹೋಬಳಿಯ ಶಾರದಮ್ಮ ಎಂಬ ಮಹಿಳೆ ಮನೆಯ ಹೊರಗೆ ಕೆಲಸ ಮಾಡುವಾಗ ಹಾವು ಕಚ್ಚಿದೆ. ತಕ್ಷಣವೇ ಅವರನ್ನು ಮೂಡಿಗೆರೆಯ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಆದರೆ ಅವರಿಗೆ ದೊರೆಯಬೇಕಾಗಿದ್ದ ಚುಚ್ಚುಮದ್ದು ಸರಿಯಾದ ಸಮಯದಲ್ಲಿ ದೊರೆಯದೇ ಸಾವನ್ನಪ್ಪಿದ್ದಾರೆ. 

ಇದನ್ನೂ ಓದಿ : ಗಣರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಪಕ್ಷಗಳ ಮುಖಂಡರ ನಡುವೆ ಕಿತ್ತಾಟ

ಪ್ರಾಥಮಿಕವಾಗಿ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಲಭಿಸದೆ ಇದ್ದಾಗ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ದುರಾದೃಷ್ಟವಶಾತ್ ಅಲ್ಲೂ ಚಿಕಿತ್ಸೆ ಲಭಿಸದೆ ಹಾಗೂ ಬೇರೆ ಖಾಸಗಿ ಆಸ್ಪತ್ರೆಗಳಲ್ಲೂ ಶೀಘ್ರವಾಗಿ ದೊರೆಯಬೇಕಿದ್ದ ಚುಚ್ಚು ಮದ್ದು ಲಭಿಸದೆ ಮಹಿಳೆ ಅಸುನೀಗಿದ್ದಾರೆ.

ಈ ಮನಕಲುಕುವ ಘಟನೆಯನ್ನು ನೋಡಿದ ಸ್ಥಳೀಯರು ಅಧಿಕಾರಿಗಳ ವಿರುದ್ದ ಹಾಗೂ ಜನ ಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜನರಿಗೆ ಅತ್ಯಾವಶ್ಯಕವಾಗಿ ದೊರೆಯಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗದೇ ಇರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ಕೂಡಲೇ ತಮ್ಮ ಸ್ಥಾನಗಳಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದ್ದಾರೆ. ಇದಲ್ಲದೇ ಅತೀ ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿರುವ ಮಲೆನಾಡಿನಲ್ಲಿ ಹೆಚ್ಚಾಗಿ ವಿವಿಧ ಬಗೆಯ ವಿಷಕಾರಿ ಹಾವುಗಳು ಕಂಡು ಬರುತ್ತದೆ ಆದರೆ ಸಾಮಾನ್ಯರಿಗೆ ಇಂತಹ ಪರಿಸ್ಥಿತಿ ಎದುರಾದಾಗ ಯಾರೂ ಪರಿಹರಿಸಲು ಮುಂಬರುವುದಿಲ್ಲ ಚಿಕಿತ್ಸೆ ಲಭಿಸದೆ ಸಾಯುವುದು ಬಡವರ ಕೊನೆಯ ಅಸ್ತ್ರವಾಗಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. 

ಅತ್ಯಂತ ವಿಸ್ತೀರ್ಣ ಹೊಂದಿರುವ ಜಿಲ್ಲೆಗೆ ಸಮರ್ಪಕವಾದ ಆಸ್ಪತ್ರೆ ಹಾಗೂ ಚಿಕಿತ್ಸೆಗಳು ಅತ್ಯಂತ ಅವಶ್ಯಕ ಪರಿಸ್ಥಿತಿಯಲ್ಲಿ ದೊರೆಯದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಈ ಕುರಿತು ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಮುಂಬರುವ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಎದುರಾಗದಂತೆ ಜವಾಬ್ದಾರಿ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.