ಚಿಕ್ಕಮಗಳೂರು : ರಾಜ್ಯಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೋನ ಲಸಿಕೆ ಅಭಿಯಾನ ನಡೆಸಲು ಸರ್ಕಾರ ಚಿಂತಿಸಿ ರಾಜ್ಯಾದ್ಯಂತ ಚಾಲನೆ ಆರಂಭಿಸಿದೆ.

ಅಂತೆಯೇ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ಕೊರೋನ ಲಸಿಕೆಗೆ ಚಾಲನೆ ದೊರೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಗೃಹ ಸಚಿವ ಆರಗಜ್ಞಾನೇಂದ್ರ ನೆರವೇರಿಸಿದರು ನಂತರ ಈ ಕುರಿತಾಗಿ ಮಾತನಾಡಿದ ಅವರು ಇಂದು 150 ಜನ ವಿದ್ಯಾರ್ಥಿಗಳಿಗೆ ಲಸಿಕೆ ದೊರೆಯಲಿದೆ ಎಂದರು. ಮುಂದಿನ ದಿನಗಳಲ್ಲಿ ಲಸಿಕೆಯನ್ನು ಹೆಚ್ಚಿಸುವ ಗುರಿಯಿಟ್ಟುಕೊಂಡು ರಾಜ್ಯಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ತೆಗೆದುಕೊಳ್ಳುವ ಸಲುವಾಗಿ ಸರ್ಕಾರ ಉತ್ತೇಜನ ನೀಡಲಿದೆ ಎಂದರು. 

ಜಿಲ್ಲೆಯಲ್ಲಿ ಒಟ್ಟು 48707 ಜನ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ, ಇಂದಿನಿಂದಲೇ ಆಯಾಯಾ ಶಾಲಾ ಕಾಲೇಜುಗಳಿಗೆ ವೈದ್ಯಕೀಯ ಸಿಬ್ಬಂದಿಗಳು ತೆರಳಿ ಲಸಿಕೆ ನೀಡುತ್ತಿದ್ದಾರೆ ಎಂದರು.

ಚಿಕ್ಕಮಗಳೂರು ನಗರದ ಜೂನಿಯರ್ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್, ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು.