ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕೊಳೆತ ಮಾವಿನಹಣ್ಣು ಭೂಮಿಯ ಮೇಲೆ ಬಿದ್ದರೆ ಅದು ಮೊಳಕೆ ಹೊಡೆದು ಚಿಗುರಿ ದಷ್ಟಪುಷ್ಟವಾಗಿ ಬೆಳೆದು ಮರವಾಗಿ ಫಲ ನೀಡುತ್ತದೆ ಆದರೆ ಸೇಬಿನ ಹಣ್ಣು ಕೊಳೆತರೆ ಗೊಬ್ಬರಕ್ಕೂ ಪ್ರಯೋಜನವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಾಧ್ಯರಾದ ಜಿ.ಕಾರ್ತಿಕ್ ಚೆಟ್ಟಿಯಾರ್ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಎದಿರೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಹಿರಿಯರಾದ ಸಚಿವ ಈಶ್ವರಪ್ಪ ಮೊದಲು ದೇಶದ ಹಾಗೂ ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ತಿಳಿದು ಮಾತನಾಡಲಿ, ಅವರು ಬಾಯಿಗೆ ಬಂದಂತೆ ಮಾತನಾಡುವುದು ಸಚಿವ ಸ್ಥಾನಕ್ಕೆ ಶೋಭೆಯಲ್ಲ. ಅವರು ಎಲ್ಲಿ, ಹೇಗೆ ಮಾತನಾಡಬೇಕು ಎಂಬುದರ ಅರಿವು ಇರುವಂತಿಲ್ಲ. ಒಂದು ರೀತಿಯ ಅರಳು ಮರಳಾದ ಮನುಷ್ಯನಂತೆ ವರ್ತಿಸಿ ಪ್ರತಿ ಸಲ ಜನರ ಮುಂದೆ ನಗೆಪಾಟಲಿಕೆಗೆ ಈಡಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಶೃಂಗೇರಿ ತಾಲೂಕು ಕಛೇರಿಯಲ್ಲಿನ ಹಕ್ಕುಪತ್ರ ದಾಖಲೆಗಳು ಕಳವು ಶಂಕೆ : ಅಧಿಕಾರಿಗಳು ತಬ್ಬಿಬ್ಬು ಉನ್ನತ ಮಟ್ಟದ ತನಿಖೆ ಅವಶ್ಯಕ
ಕೊಳೆತ ಮಾವಿನಹಣ್ಣಿನ ಬಳಿ ಜನರು ಹೋಗುವುದಿಲ್ಲ ಎನ್ನುವ ನೀವು ಕಾಂಗ್ರೆಸ್‌ನ ಮಾವಿನ ಹಣ್ಣನ್ನು ಖರೀದಿಸಿಯೇ ಬಿಜೆಪಿ ಇಂದು ಅಧಿಕಾರ ಹಿಡಿದಿದೆ ಎಂಬುದು ಮತ್ತು ನೀವೂ ಕೂಡ ಸಚಿವರಾಗಿರುವುದನ್ನು ಮರೆತಿದ್ದೀರಿ, ಚಿಕ್ಕಮಗಳೂರು ಜಿಲ್ಲೆಗೆ ನೀವು ಮೂರನೇ ಉಸ್ತುವಾರಿ ಸಚಿವರಾಗಿದ್ದೀರಾ ಇನ್ನು ಎಷ್ಟು ದಿನದಲ್ಲಿ ನಿಮ್ಮ ಉಸ್ತುವಾರಿ ಎಕ್ಸ್‌ಪೈರಿ ಆಗಲಿದೆ ಎಂಬುದನ್ನು ಜನರಿಗೆ ತಿಳಿಸಿ ಎಂದು ಕುಟುಕಿದ್ದಾರೆ.
ಕೊರೋನಾ ಸಮಯದಲ್ಲಿ ಸರ್ಕಾರದಿಂದ ಪರಿಹಾರ ಇನ್ನೂ ಜನರ ಕೈಗೆ ತಲುಪಿಲ್ಲ. ಅದರ ಬಗ್ಗೆ ಸ್ವಲ್ಪ ಗಮನಹರಿಸಿದರೆ ಒಳಿತು. ಕೆಲವು ಕಡೆ ತಮ್ಮ ಸರ್ಕಾರ ಕೊವೀಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ನೀಡುರುವ ಚೆಕ್ ಸಹ ಬ್ಯಾಂಕ್ ನಿಂದ ವಾಪಸ್ ಆಗುತ್ತಿದೆ. ಇನ್ನೇನು ಸ್ವಲ್ಪ ದಿನಗಳಲ್ಲಿ ನಿಮ್ಮ ಸರ್ಕಾರ ಸಹ ಬೌನ್ಸ್ ಆಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರಿಗೆ ದೇಶದ ಜನರ ಹಿತ ಮುಖ್ಯವಲ್ಲ. ಅವರಿಗೆ ಅಧಿಕಾರ ಬೇಕೆ ಹೊರತು ಜನರ ಕಷ್ಟಸುಖಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಚಾಶಕ್ತಿಯನ್ನು ಬೆಳೆಸಿಕೊಂಡಿಲ್ಲ. ದೇಶ, ಧರ್ಮದ ಹೆಸರಿನಲ್ಲಿ ಓಟು ಪಡೆದು ಜನರ ಕಣ್ಣಿಗೆ ಮಂಕುಬೂದಿ ಎರಚುವ ಮೂಲಕ ಅಧಿಕಾರ ನಡೆಸುತ್ತಿರುವುದು ರಾಜ್ಯದ ಜನರಿಗೆ ತಿಳಿದಿದೆ ಎಂದರು.
ಚುನಾವಣೆ ಸಮಯ ಹತ್ತಿರವಾದಾಗ ಮಾತ್ರ ದೇವರು, ಹುತಾತ್ಮರು, ಸ್ವಾತಂತ್ರ್ಯ ಹೋರಾಟಗಾರರು ನಿಮ್ಮ ಪಕ್ಷಕ್ಕೆ ನೆನಪಾಗುತ್ತಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಡಿಮ್ಯಾಂಡ್‌ಗಾಗಿ ಹೀಗೆಲ್ಲ ಮಾಡುತ್ತಿದೆ ಎಂದು ಹೇಳಿದ್ದೀರಾ ನಮ್ಮ ಪಕ್ಷ ಸ್ವಾತಂತ್ರ್ಯ ಪೂರ್ವದಿಂದ ಬಂದಂತಹದ್ದು. ನೀವು ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಳ್ಳಲು ಈ ರೀತಿಯ ಹೇಳಕೆಗಳನ್ನು ನೀಡುವುದು ಸರಿಯಲ್ಲ. ಸಂವಿಧಾನಕ್ಕೆ ಮತ್ತು ತಮ್ಮ ಸಚಿವ ಸ್ಥಾನಕ್ಕಾದರೂ ಗೌರವ ಕೊಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಇಲ್ಲದಿದ್ದರೆ ಜನರೇ ನಿಮಗೆ ಪಾಠಕಲಿಸುವ ಕಾಲ ದೂರವಿಲ್ಲ ಎಂದರು.

0 Comments