ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಹಸೀಲ್ದಾರ್ ವಾಹನದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜೇತ್ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿ ಒಂದು ದಿನ ಕಳೆದಿದೆ.
ಈ ಘಟನೆಯ ಹಿಂದಿರುವ ಭ್ರಷ್ಟ ಅಧಿಕಾರಿಗಳನ್ನು ತನಿಖೆ ನಡೆಸಿ ಆದಷ್ಟು ಶೀಘ್ರವಾಗಿ ಅವರ ಮೇಲೆ ಗಂಭೀರವಾಗಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಮೃತ ಚಾಲಕ ವಿಜೇತ್ ನ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿ ನಿನ್ನೆ ರಾತ್ರಿಯಿಂದ ಇಂದು ಸಂಜೆಯವರೆಗೆ ವಿಜೇತ್ ಅವರ ಸಂಬಂಧಿಕರು ಹಾಗೂ ಶೃಂಗೇರಿಯ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದ ನಂತರದಲ್ಲಿ ಆತನ ಕುಟುಂಬಕ್ಕೆ ಪರಿಹಾರವಾಗಿ ಎಂಟು ಲಕ್ಷ ರೂಗಳನ್ನು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ವತಿಯಿಂದ ಸಂಗ್ರಹ ಮಾಡಿ ನೀಡಲಾಗಿದೆ. ಆರಂಭದಲ್ಲಿ 1 ಕೋಟಿ ಪರಿಹಾರ ನೀಡಬೇಕು ಹಾಗೂ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ಅಲ್ಲಿಯವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎನ್ನುತ್ತಿದ್ದ ಪ್ರತಿಭಟನಾಕಾರರು ಲಕ್ಷದ ಪರಿಹಾರದ ಭರವಸೆಗೆ ಪ್ರತಿಭಟನೆ ಕೊನೆಗೊಳಿಸಿದ್ದಾರೆ.
ಶೃಂಗೇರಿಯ ಪ್ರಮುಖ ಮೂರು ಪಕ್ಷಗಳ ಮುಖಂಡರು ಹಾಗೂ ಜನಪ್ರತಿನಿಧಿಗಳು ಬೆಳಗ್ಗಿನಿಂದ ಸಂಜೆಯವರೆಗೆ ಸ್ಥಳದಲ್ಲೇ ಇದ್ದು ಹಲವು ಭರವಸೆಗಳನ್ನು ನೀಡಿದರು ಕೂಡ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಸಾರ್ವಜನಿಕರು ಶೃಂಗೇರಿಯ ಶಂಕರಾಚಾರ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಮೃತ ವ್ಯಕ್ತಿಯ ಶವವನ್ನು ರಸ್ತೆಯಲ್ಲಿರಿಸಿ ಪ್ರತಿಭಟಿಸುವ ಮೂಲಕ ಆಗ್ರಹಿಸಿದರು ನಂತರದಲ್ಲಿ ಎಲ್ಲರ ಮನವೊಲಿಸಿ ತಪ್ಪಿತಸ್ಥರ ಮೇಲೆ ಮತ್ತೊಂದು ದೂರು ದಾಖಲು ಮಾಡುವುದಾಗಿ ಹಾಗೂ ಮೃತ ವಿಜೇತ್ ನ ಕುಟುಂಬಕ್ಕೆ ಎಂಟು ಲಕ್ಷ ರೂಗಳನ್ನು ಪರಿಹಾರದ ರೂಪದಲ್ಲಿ ನೀಡುವುದಾಗಿ ತಿಳಿಸಿ ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಲಾಯಿತು. ಬಡವರ ಕೋಟಿ ಕೋಟಿ ಹಣ ನುಂಗಿ ನೀರು ಕುಡಿದ ಅಧಿಕಾರಿಗಳ ಷಡ್ಯಂತ್ರಕ್ಕೆ ಬಲಿಯಾದ ಅಮಾಯಕನ ಸಾವಿಗೆ ಲಕ್ಷದಲ್ಲೇ ಪರಿಹಾರ ಭರವಸೆ ನೀಡಿ ಕೈತೊಳೆದುಕೊಂಡಂತಾಗಿದೆ.
ಒಂದೆಡೆ ಅಮಾಯಕ ಚಾಲಕ ಯಾವುದೇ ತಪ್ಪನ್ನು ಮಾಡದೇ ಭ್ರಷ್ಟ ಅಧಿಕಾರಿಗಳ ಷಡ್ಯಂತ್ರದಿಂದ ಬಲಿಯಾಗಿದ್ದಾನೆ ಈ ಕುರಿತು ಸೂಕ್ತ ತನಿಖೆಯಾಗಬೇಕು ಹಾಗೂ ತಪ್ಪೆಸಗಿದವರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಡಿಎನ್ ಜೀವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ, ಕಾಂಗ್ರೆಸ್ ಮುಖಂಡ ನಟರಾಜ್, ಬಿಎಸ್ ಪಿ ಮುಖಂಡ ಗೋಪಾಲ್ ಹಾಗೂ ಸಾರ್ವಜನಿಕರು ಸಂಬಂಧಿಕರು ಪ್ರತಿಭಟನೆಯಲ್ಲಿ ಇದ್ದರು.

0 Comments