ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಹಸೀಲ್ದಾರ್ ಅಂಬುಜಾ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಅವರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ನಂತರದಲ್ಲಿ ದಿನಕ್ಕೊಂದು ರೀತಿಯ ಬೆಳವಣಿಗೆಗಳು ಶೃಂಗೇರಿಯ ತಾಲೂಕು ಕಛೇರಿಯಲ್ಲಿ ನಡೆಯುತ್ತಲೇ ಇದೆ. 

ಕಳೆದ ಕೆಲ ದಿನಗಳ ಹಿಂದೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ತಹಸೀಲ್ದಾರ್ ಅಂಬುಜಾ ಅವರನ್ನು ತನಿಖೆಗೆ ಒಳಪಡಿಸಿದ್ದರು ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು ನಂತರದಲ್ಲಿ ಅವರಿಗೆ ಜಾಮೀನು ಕೂಡ ದೊರೆತಿತ್ತು ಹಾಗೂ ಅಂಬುಜಾರವರ ಕುರಿತಾದ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ : ಜೈನ ಧರ್ಮದ ಕುರಿತಾಗಿ ಅವಹೇಳನಕಾರಿ ಪೋಸ್ಟ್ ; ಐವರ ವಿರುದ್ಧ ದೂರು ದಾಖಲು

ಗ್ರಾಮ ಲೆಕ್ಕಿಗ ಸಿದ್ದಪ್ಪ, ಸತೀಶ್, ಶಿವಕುಮಾರ್ ಹಾಗೂ ರಾಜಸ್ವ ನಿರೀಕ್ಷಕ ಸಂದೀಪ್ ಅಮಾನತು : 

ಗ್ರಾಮ ಲೆಕ್ಕಿಗ ಸಿದ್ದಪ್ಪ ಭ್ರಷ್ಟಾಚಾರ ನಡೆಸುವಾಗ ಆತನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ನಂತರದಲ್ಲಿ ಗ್ರಾಮ ಲೆಕ್ಕಿಗ ಸಿದಪ್ಪನನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದರು. ಅಂತೆಯೇ ಶೃಂಗೇರಿ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರಾದ ಸಂದೀಪ್, ಗ್ರಾಮ ಲೆಕ್ಕಿಗರಾದ ಸತೀಶ್ ಮತ್ತು ವಿ.ಶಿವಕುಮಾರ್ ಇವರನ್ನೂ ಕೂಡ ಕಛೇರಿಯಿಂದ ಅಮಾನತುಗೊಳಿಸಲಾಗಿತ್ತು.

ಶೃಂಗೇರಿಯ ತಾಲೂಕು ಕಛೇರಿಯಲ್ಲಿನ ಕಡತಗಳು ನಾಪತ್ತೆಯಾಗಿರುವ ಕುರಿತು ವರದಿ ಸಲ್ಲಿಸಿರುವ ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ಈ ಕುರಿತು ದೂರು ದಾಖಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ ಹಾಗೂ ತನಿಖೆಯ ಕುರಿತಾಗಿ ತಿಳಿಸಿದ್ದಾರೆ.

ಸರ್ಕಾರವು ಶೃಂಗೇರಿಗೆ ತಹಸೀಲ್ದಾರ್ ಅವರನ್ನು ನೇಮಕ ಮಾಡುವವರೆಗೂ ಚುನಾವಣಾ ತಹಸೀಲ್ದಾರರಾದ ಶ್ರೀ ಎಸ್ ವಿ ಪ್ರಸಾದ್ ಅವರನ್ನು ಶೃಂಗೇರಿಯ ತಹಸೀಲ್ದಾರರಾಗಿ ನೇಮಕ ಮಾಡಲಾಗಿದೆ ಎಂಬ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ. ಶೃಂಗೇರಿ ತಹಸೀಲ್ದಾರ್ ಕಛೇರಿಯ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಕೇಸ್ ವರ್ಕರ್ ಪ್ರಕಾಶ್ ಅವರನ್ನು ಚಿಕ್ಕಮಗಳೂರಿನ ತಹಸೀಲ್ದಾರ್ ಕಛೇರಿಗೆ ನಿಯೋಜಿಸಲಾಗಿದೆ ಹಾಗೂ ಕೊಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಧುಸೂಧನ್ ಅವರನ್ನು ಗ್ರಾಮ ಲೆಕ್ಕಿಗರಾಗಿ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ಹಾಗೂ ಕಸಬಾ ಹೋಬಳಿಗೆ ನಿಯೋಜಿಸಲಾಗಿದೆ. ಸಾಕ್ಷ್ಯ ನಾಶಪಡಿಸುವ, ತಿರುಚುವ ಸಾಧ್ಯತೆ ಇರುವುದರಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.