ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಒಂದು ದಿನದ ಹಿಂದೆ ನಡೆದ ಅಹಿತಕರ ಘಟನೆಯ ಕುರಿತಾಗಿ ತಪ್ಪೆಸಗಿದವರನ್ನು ಈ ಕೂಡಲೇ ಬಂಧಿಸಬೇಕೆಂದು ಕೊಪ್ಪ ಬಿಜೆಪಿ ಘಟಕ ಹಾಗೂ ಬಿಜೆಪಿ ಯುವಮೋರ್ಚಾ ಆಗ್ರಹಿಸಿದೆ.
ಈ ಕುರಿತು ಕೊಪ್ಪ ಆರಕ್ಷಕ ಇಲಾಖೆಯ ಮೂಲಕ ಕರ್ನಾಟಕ ಸರ್ಕಾರದ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು. ರಾಮನಗರ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆಸಿದ್ದ ರಾಮನಗರ ಜಿಲ್ಲಾಭಿವೃದ್ದಿ ಅನುಷ್ಠಾನ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ಮಾತನಾಡುವಾಗ ಮುಖ್ಯಮಂತ್ರಿಗಳ ಎದುರಿನಲ್ಲೇ ಲೋಕಸಭಾ ಸದಸ್ಯ ಡಿ.ಕೆ ಸುರೇಶ್ ಹಾಗೂ ಎಂ.ಎಲ್.ಸಿ ರವಿ ಅವರು ಗೂಂಡಾ ವರ್ತನೆ ತೋರಿದ್ದಾರೆ, ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕೊಪ್ಪ ಬಿಜೆಪಿ ಯುವಮೋರ್ಚಾ ಘಟಕದ ಪದಾಧಿಕಾರಿಗಳು ದೂರು ನೀಡಿದ್ದಾರೆ.
ಶೀಘ್ರವಾಗಿ ತಪ್ಪಿತಸ್ಥರನ್ನು ಬಂಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸತೀಶ್ ಅದ್ದಡ, ಯುವಮೋರ್ಚಾದ ಅಧ್ಯಕ್ಷರಾದ ಮಂಜುನಾಥ್ ಕಾರ್ಬೈಲ್, ಯುವಮೋರ್ಚಾ ಕಾರ್ಯದರ್ಶಿಗಳಾದ ಶರತ್ ನಿಲುವಾಗಿಲು, ಶಾನುವಳ್ಳಿ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶರತ್ ಬಿಳುಕೊಪ್ಪ, ಮಧುಪ್ರಿಯ ಇನ್ನಿತರರು ಉಪಸ್ಥಿತರಿದ್ದರು.

0 Comments