ಶೃಂಗೇರಿ : (News Malnad Report) ಅಧಿಕಾರಿಗಳು ಒಂದೆಡೆ ತನಿಖೆಯ ಸಂದರ್ಭದಲ್ಲಿ ಹಕ್ಕುಪತ್ರ ವಿತರಣೆಯೇ ಮಾಡಿಲ್ಲ, ಸಹಿಯೇ ಹಾಕಿಲ್ಲ ಎನ್ನುತ್ತಿದ್ದರೆ, ಮತ್ತೊಂದೆಡೆ ವಿತರಿಸಿದ್ದಕ್ಕೆ ದಾಖಲೆಗಳು ಲಭ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದ ಸುಮಾರು 20 ಆಟೋ ಚಾಲಕರಿಗೆ ಹಕ್ಕುಪತ್ರ ವಿತರಣೆ ಮಾಡಿರುವ ಫೋಟೋ ಲಭ್ಯವಾಗಿದ್ದು ಫಲಾನುಭವಿಗಳ ಕೈಯಲ್ಲಿ ಇರುವ ಹಕ್ಕುಪತ್ರ ಸಹ ಸ್ಪಷ್ಟವಾಗಿ ಕಾಣುತ್ತಿದೆ.
ಶೃಂಗೇರಿ ತಹಸೀಲ್ದಾರ್ ಅಂಬುಜಾ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಎಸಿಬಿ ಬಲೆಗೆ ಬಿದ್ದು ಜೈಲು ಪಾಲಾದ ನಂತರ ಜಿಲ್ಲಾಧಿಕಾರಿಗಳ ಆದೇಶದಂತೆ ಉಪವಿಭಾಗಾಧಿಕಾರಿಗಳು ತನಿಖೆ ಕೈಗೊಂಡಿದ್ದರು ಈ ಸಂಧರ್ಭದಲ್ಲಿ ಕೇಸ್ ವರ್ಕರ್ ಪ್ರಕಾಶ್ ತಾನು ಯಾವುದೇ ಕಡತಕ್ಕೆ ಸಹಿ ಹಾಕಿಲ್ಲವೆಂದೂ, 2015ರಿಂದ ಈಚೆಗೆ ಯಾವುದೇ ಹಕ್ಕುಪತ್ರ ವಿತರಣೆ ಮಾಡಿರುವುದಿಲ್ಲ ಎಂದು ಸಾಕ್ಷಾತ್ ಸತ್ಯ ಹರಿಶ್ಚಂದ್ರರಂತೆ ಹೇಳಿಕೆ ನೀಡಿ ಹಗರಣದಲ್ಲಿ ತನ್ನ ಪಾತ್ರವೇ ಇಲ್ಲ ಎಂದು ಬಚಾವಾಗಿದ್ದರು. ಹಾಗೆಯೇ ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ ಶೃಂಗೇರಿ ತಾಲೂಕು ಕಛೇರಿಯಿಂದ 2019ರ ಈಚೆಗೆ ಯಾವುದೇ ಹಕ್ಕುಪತ್ರ ವಿತರಿಸಿಲ್ಲ ಎಂಬ ಮಾಹಿತಿಯನ್ನೂ ತಾಲೂಕು ಕಛೇರಿಯಿಂದ ನೀಡಿದ್ದರು. ಆದರೆ ಕೇಸ್ ವರ್ಕರ್ ಪ್ರಕಾಶ್ ಸೇರಿದಂತೆ ತಹಸೀಲ್ದಾರ್ ಅವರು ಹಕ್ಕುಪತ್ರ ನೀಡುವ ಸಂಧರ್ಭದಲ್ಲಿ ಅವರ ಪಕ್ಕದಲ್ಲೇ ನಿಂತು ಪೋಸ್ ಕೊಟ್ಟಿರುವ ಅಧಿಕಾರಿಗಳ ಫೋಟೋ ಹೊರಬಂದಿದ್ದು ಶೃಂಗೇರಿ ತಾಲೂಕು ಕಛೇರಿಯ ಕೆಲವು ಅಧಿಕಾರಿಗಳು ನಡೆಸುತ್ತಿರುವ ನಾಟಕ ಕಂಪನಿಯ ಏಕಪಾತ್ರಾಭಿನಯಕ್ಕೆ ಉನ್ನತ ಅಧಿಕಾರಿಗಳು ಸೇರಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಹಕ್ಕು ಪತ್ರಕ್ಕೆ ಸಹಿ ಹಾಕುವಾಗ ತೆಗೆದುಕೊಂಡ ಕಾಣಿಕೆಗಾದರೂ ಸತ್ಯ ನುಡಿಯಬಹುದಿತ್ತು, ಆಗ ಸಾಲ ಸೋಲ ಮಾಡಿ ಹಕ್ಕುಪತ್ರ ಮಾಡಿಸಿಕೊಂಡಿರುವ ಕೆಲವು ಬಡಪಾಯಿಗಳ ಬದುಕು ಬೀದಿಗೆ ಬರುತ್ತಿರಲಿಲ್ಲ ಎಂಬುದು ಜನರ ಮಾತು.
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು:
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬ ಗಾದೆ ಶೃಂಗೇರಿ ಹಕ್ಕುಪತ್ರ ಹಗರಣದ ಸಂಬಂಧ ಉನ್ನತ ಅಧಿಕಾರಿಗಳ ವರ್ತನೆಯಿಂದ ಕಾಣುತ್ತಿದೆ.
ಹಕ್ಕುಪತ್ರ ವಿತರಣೆ ಮೂರು ತಿಂಗಳಿನಿಂದ ನಡೆಯುತ್ತಿತ್ತು, ಇದು ಉನ್ನತ ಅಧಿಕಾರಿಗಳಿಗೂ ತಿಳಿಯದ ವಿಷಯವಾಗಿರವಿಲ್ಲ, ಆದರೆ ಆಗಲೇ ಕಡಿವಾಣ ಹಾಕದೇ ಕೊನೆಗೆ ಕ್ರಮಕ್ಕೆ ಇಳಿದಿರುವುದರಿಂದ ಕೆಲವು ಬಡಪಾಯಿಗಳಿಗೂ ಸಮಸ್ಯೆಯಾಗಿದೆ. ಎಲ್ಲಾ ಪಕ್ಷದವರು, ಅಧಿಕಾರಿಗಳಿಗೂ ಮಾಹಿತಿ ಇರುವಾಗ ಅಧಿಕೃತವೆ ಇರಬಹುದು ಎಂದು ನಂಬಿ ಕೊನೆಗೆ ಕೆಲವು ಬಡಪಾಯಿಗಳು ಸಹ ಹಕ್ಕುಪತ್ರ ಮಾಡಿಸಿಕೊಂಡಿದ್ದಾರೆ. ಒಂದಕ್ಕೆ ಹತ್ತು ಪಟ್ಟು ಕಿತ್ತಿರುವ ಕೆಲವು ಕಮೀಷನ್ ಏಜೆಂಟರೇನೋ ಹಾಯಾಗಿ ಹೆಬ್ಬಾವಿನಂತೆ ಮಲಗಿದ್ದಾರೆ, ಇದರಿಂದ ಕೊಟ್ಟವ ಕೋಡಂಗಿ ಇಸ್ಕೊಂಡವ ಈರಭದ್ರ ಎಂಬಂತಾಗಿದೆ ಜನರ ಪರಿಸ್ಥಿತಿ.
ಏಜೆಂಟರಿಗೆ ಧರ್ಮದೇಟಿನ ಭಯ :
ಕೆಲವು ನಾಯಕರು ಮಾತ್ರ ಜನರಿಗೆ ನ್ಯಾಯ ಸಮ್ಮತವಾಗಿ ನೇರವಾಗಿ ಮಾತನಾಡಿಸಿ ಹಕ್ಕು ಪತ್ರ ಮಾಡಿಸಿಕೊಟ್ಟಿದ್ದಾರೆ, ಆದರೆ ಹಕ್ಕುಪತ್ರ ಕೊಡಿಸುವುದಾಗಿ ಲಕ್ಷ ಲಕ್ಷ ತೆಗೆದುಕೊಂಡ ಕೆಲವು ಹಣಬಾಕರಿಗೆ ಈಗ ಧರ್ಮದೇಟಿನ ಭಯ ಕಾಡುತ್ತಿದೆ, ಹಲವರು ತಾವು ಮುಂದೆ ಹೇಳಿಕೆ ನೀಡುವುದಾಗಿಯೂ ನಮ್ಮ ಸಂಸ್ಥೆಯನ್ನು ಸಂಪರ್ಕಿಸುತ್ತಿದ್ದಾರೆ. ಹಾಗೆಯೇ ಬಹಳಷ್ಟು ಜನರು ದುಪ್ಪಟ್ಟು ಹಣ ಪಡೆದು ಮಾಡಿಕೊಟ್ಟವರಿಗೆ ಕರೆ ಮಾಡಿ ತಮ್ಮ ಹಣ ವಾಪಾಸು ನೀಡುವಂತೆ ಕೇಳುತ್ತಿದ್ದಾರೆ. ಬಹುಶಃ ಮುಂದೆ ಧರ್ಮದೇಟು ಬಿದ್ದರೂ ಬೀಳಬಹುದು ಎಂಬುದು ಸಾರ್ವಜನಿಕರ ಚರ್ಚೆ.
ರಾಜಕೀಯ ಮುಖಂಡರೇ ಎಚ್ಚೆತ್ತುಕೊಳ್ಳೀ :
ಶೃಂಗೇರಿಯಲ್ಲಿ 671 ಹಕ್ಕುಪತ್ರ ವಿತರಣೆ ಆಗಿರುವುದಾಗಿ ವರದಿಯಲ್ಲಿ ಉಲ್ಲೇಖವಿದೆ, ಅದರಲ್ಲಿ ಖಾಲಿ ಜಾಗಕ್ಕೆ, ಅರಣ್ಯ ಇಲಾಖೆ ಜಾಗಕ್ಕೆ ನೀಡಿರುವುದನ್ನು ಹೊರತುಪಡಿಸಿ ಹಲವು ವರ್ಷಗಳಿಂದ ವಾಸವಿರುವ ಜನಸಾಮಾನ್ಯರೂ ಪಡೆದಿದ್ದಾರೆ, ಈಗ ಈ ಅಕ್ರಮಗಳಿಂದ ಅವರಿಗೂ ಅನ್ಯಾಯವಾಗಿದ್ದು ಜನನಾಯಕರು ಈಗ ಎಚ್ಚೆತ್ತುಕೊಳ್ಳಬೇಕಿದೆ, ಒಂದೋ ಅವರಿಗೆ ಹಣ ಹಿಂದಿರುಗಿಸಿ ಕೊಡಿಸಬೇಕು ಇಲ್ಲವೇ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಅಧಿಕೃತ ಮಾಡಬೇಕು. ಅಧಿಕಾರಿಗಳ ಹಣದಾಸೆಯಿಂದ ಜನಸಾಮಾನ್ಯರ ಬದುಕು ಬಡವಾಗಬಾರದು

0 Comments