ಮೂಡಿಗೆರೆ : ರಸ್ತೆ ಇಲ್ಲದೆ ಅನಿವಾರ್ಯವಾಗಿ ತೆಪ್ಪದಲ್ಲೇ ಶವ ಸಾಗಾಟ ಮಾಡಿದ ಮನ ಕಲುಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಸೌಕರ್ಯವಿಲ್ಲದೆ ಮಲೆ ಕುಡಿಕೆಯ ಕುಟುಂಬವೊಂದು ಮೃತಪಟ್ಟ ತಮ್ಮ ಕುಟುಂಬದ ಸದಸ್ಯರೊಬ್ಬರ ಮೃತ ದೇಹವನ್ನು ತೆಪ್ಪದಲ್ಲಿ ಸಾಗಿಸಿದ ಘಟನೆ ಹೊಳೆಕೂಡಿಗೆ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಹೊಳೆಕೂಡಿಗೆ ಮೂಲದ ಸುಬ್ರಾಯ (70) ವರ್ಷ ಎಂಬುವವರು ಮೂತ್ರಪಿಂಡದ ಸಮಸ್ಯೆಯಿಂದ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅಂತ್ಯಸಂಸ್ಕಾರವನ್ನು ನೆರವೇರಿಸಲು ಶನಿವಾರದಂದು ಮೃತದೇಹವನ್ನು ತರಲಾಯಿತು.ಆದರೆ ಮೃತರ ಮನೆಗೆ ಹೋಗಲು ರಸ್ತೆ ಸೌಕರ್ಯ ಇಲ್ಲದೆ ಇರುವುದರಿಂದ ತೆಪ್ಪದಲ್ಲಿಯೇ ಮೃತದೇಹವನ್ನು ಇಟ್ಟು ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಊರು ನಾಲ್ಕು ದಶಕಗಳಿಂದ ಸಂಪರ್ಕಕ್ಕೆ ತೆಪ್ಪವನ್ನೇ ಆಶ್ರಯಿಸಿದ್ದು ಈ ಕುಟುಂಬ ಬೇರೆ ಬೇರೆ ಸಂದರ್ಭಗಳಲ್ಲಿ ಒಟ್ಟು 9 ಮೃತದೇಹವನ್ನು ತೆಪ್ಪದಲ್ಲಿ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದೆ. ನದಿಯ ಒಂದು ತೀರದ ಜಾಗವನ್ನು ತೆರವುಗೊಳಿಸಿ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಅಥವಾ ತೂಗುಸೇತುವೆ ನಿರ್ಮಿಸುವಂತೆ ಈ ಊರಿನವರು ಹಲವು ಬಾರಿ ಜಿಲ್ಲಾಧಿಕಾರಿಗಳು, ಸರ್ಕಾರವನ್ನು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ

- ತನು ಕೊಟ್ಟಿಗೆಹಾರ