ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಆಗಬೇಕಾದ ಕಾಮಗಾರಿಗಳ ಕುರಿತಾಗಿ ಶೃಂಗೇರಿಯ ಪಟ್ಟಣ ಪಂಚಾಯತಿಯಲ್ಲಿ ಇಂದು ಸಾರ್ವಜನಿಕ ಸಭೆ ನಡೆಯಿತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣ ಪಂಚಾಯತಿಯಲ್ಲಿ 2022 - 23 ನೆಯ ಸಾಲಿನಲ್ಲಿ ಶೃಂಗೇರಿ ಪಟ್ಟಣದ ಅಭಿವೃದ್ದಿಯ ಸಲುವಾಗಿ ಬೇಕಾಗುವ ಅಗತ್ಯ ಕಾಮಗಾರಿಗಳ ಕುರಿತಾಗಿ ಇಂದು ಸಾರ್ವಜನಿಕ ಸಭೆ ನಡೆಯಿತು. ಈ ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಹಾಗೂ ಪಟ್ಟಣ ಪಂಚಾಯತ್ ನ ಅಧಿಕಾರಿಗಳು ಭಾಗವಹಿಸಿದ್ದರು. ಮುಖ್ಯವಾಗಿ ಪಟ್ಟಣಕ್ಕೆ ಆದಾಯ ತರುವ ಸಲುವಾಗಿ ನಡೆಸಬೇಕಾದ ಚಟುವಟಿಕೆಗಳ ಕುರಿತು, ಸಾರ್ವಜನಿಕ ಶೌಚಾಲಯಗಳ ನಿರ್ಮಾಣದ ಕುರಿತು ಹಾಗೂ ಪಟ್ಟಣಕ್ಕೆ ಅವಶ್ಯವಾಗಿ ಬೇಕಾಗಿರುವ ಇನ್ನೂ ಅನೇಕ ಸೌಲಭ್ಯಗಳ ಕುರಿತಾಗಿ ಸಾರ್ವಜನಿಕರು ಹಾಗೂ ಪಟ್ಟಣ ಪಂಚಾಯತ್ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಇದನ್ನೂ ಓದಿ :
ಶೃಂಗೇರಿ ಪಟ್ಟಣದ ಅಭಿವೃದ್ಧಿ ಸಂಬಂಧ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಶೃಂಗೇರಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ ಪಟ್ಟಣದ ಮುಖ್ಯ ರಸ್ತೆಯಾದ ಭಾರತೀಬೀದಿ ಅಗಲೀಕರಣ ವಿಚಾರವಾಗಿ ಪ್ರಸ್ತಾಪಿಸಿ ಶೃಂಗೇರಿ ಪಟ್ಟಣದ ನಿವಾಸಿಗಳು ವಿಶಾಲ ಹೃದಯ ತೋರಿದಲ್ಲಿ ರಸ್ತೆ ಅಗಲೀಕರಣ ಸಾಧ್ಯವಿದೆ, ಪಟ್ಟಣದ ಹೊರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಕ್ರಿಯೆ ಚಾಲನೆಗೆ ನೀಡುತ್ತಿರುವ ಈ ಸಂದರ್ಭದಲ್ಲಿ ಪಟ್ಟಣದ ಭಾರತೀಬೀದಿಯನ್ನು ಬೈಪಾಸ್ ರಸ್ತೆಯಾಗಿ ರಾಷ್ಟ್ರೀಯ ಹೆದ್ದಾರಿಗೆ ಜೋಡಿಸಿದಲ್ಲಿ ಪಟ್ಟಣದ ನಿವಾಸಿಗಳಿಗೆ ಹೆಚ್ಚಿನ ಪರಿಹಾರ ಮೊತ್ತ ಸಿಗುವುದರ ಜೊತೆಗೆ ಶೃಂಗೇರಿ ಪಟ್ಟಣದ ಸಮಗ್ರ ಅಭಿವೃದ್ಧಿ ಸಾಧ್ಯ.
ಮೈಸೂರು, ತೀರ್ಥಹಳ್ಳಿ ರಸ್ತೆಯನ್ನು ನೋಡಿಕೊಂಡು ಬಂದು ಕೊಂಡಾಡುವ ನಾವು ನಮ್ಮ ಊರಿನ ರಸ್ತೆಯ ಅಭಿವೃದ್ಧಿಗೆ ಕೈಜೋಡಿಸಿ ಕೆಲಸ ಮಾಡಬೇಕಿದೆ. ಪಟ್ಟಣದ ನಿವಾಸಿಗಳು ಹೃದಯ ವೈಶಾಲ್ಯತೆ ತೋರಿದರೆ ಇದು ಶೀಘ್ರದಲ್ಲೇ ಸಾಧ್ಯವಾಗಲಿದೆ. ನಿವಾಸಿಗಳಿಗೆ ಹೆಚ್ಚಿನ ಪರಿಹಾರ ದೊರಕಿಸುವಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಪಾರ್ಕ್ ಉನ್ನತೀಕರಣ, ಪಟ್ಟಣದಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಆಟದ ಮೈದಾನ, ತುಂಗಾ ನದಿಯ ಶುಚಿತ್ವ ಕಾಪಾಡುವುದು, ಪಟ್ಟಣದಿಂದ ಕಲ್ಕಟ್ಕೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಹಾಗೂ ಹಲವು ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು, ಪ.ಪಂ ಮಾಜಿ ಅಧ್ಯಕ್ಷರಾದ ನಾಗೇಶ್ ಕಾಮತ್, ಪ.ಪಂ ಮುಖ್ಯಾಧಿಕಾರಿಗಳಾದ ಪೂಜಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಯಶೀಲಾ ಚಂದ್ರಶೇಖರ್, ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಇದ್ದರು

0 Comments