ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬುಜಾ ಅವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದು ತನಿಖೆಗೆ ಒಳಪಟ್ಟಿದ್ದರು ಹಾಗೂ ನಂತರದಲ್ಲಿ ಬಂಧನಕ್ಕೀಡಾಗಿದ್ದರು. ತನಿಖೆಗೆ ಒಳಪಟ್ಟಿರುವ ಅಧಿಕಾರಿಗಳ ಬದಲಾಗಿ ಬೇರೆ ಅಧಿಕಾರಿಗಳ ನಿಯೋಜನೆಯನ್ನು ಜಿಲ್ಲಾಧಿಕಾರಿಗಳು ಮಾಡಿದ್ದಾರೆ. 

ಅಂಬುಜಾ ಅವರ ಬದಲಾಗಿ ಶೃಂಗೇರಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಕರ್ತವ್ಯ ಹಾಗೂ ಕಛೇರಿಯ ದೈನಂದಿನ ಆಡಳಿತ ನಿರ್ವಹಣೆಗಾಗಿ ತಹಸೀಲ್ದಾರ್ ಹುದ್ದೆಯ ಅವಶ್ಯಕತೆ ಇರುವುದರಿಂದ ಹಾಗೂ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಟಿಯಿಂದ ಕೊಪ್ಪ ತಹಸೀಲ್ದಾರ್ ಶ್ರೀ ಹೆಚ್. ಎಸ್ ಪರಮೇಶ್ ಅವರನ್ನು ಹೆಚ್ಚುವರಿಯಾಗಿ ಶೃಂಗೇರಿ ತಾಲೂಕಿಗೆ ಕಾರ್ಯನಿರ್ವಾಹಕ ದಂಡಾಧಿಕಾರಿ ಹುದ್ದೆ ನಿರ್ವಹಣೆಗಾಗಿ ನೇಮಿಸಲಾಗಿದೆ ಹಾಗೂ ಶೃಂಗೇರಿ ತಹಸೀಲ್ದಾರ್ ಕಛೇರಿಯ ಇತರೆ ಆಡಳಿತ ಮತ್ತು ಆರ್ಥಿಕ ನಿರ್ವಹಣೆಗಾಗಿ ಶ್ರೀ ಎಂ ಬಸವರಾಜ್, ತಹಸೀಲ್ದಾರ್ ಗ್ರೇಡ್ 2 ಅವರನ್ನು ನೇಮಕ ಮಾಡಲಾಗಿದೆ ಎಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರು ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಮುಂದಿನ ಆದೇಶದ ವರೆಗೂ ಈ ಅಧಿಕಾರಿಗಳೇ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.