ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವ ಬೆಂಗಾವಲು ವೈಫಲ್ಯದ ಹಿನ್ನೆಲೆ ಪಂಜಾಬ್ ಸರ್ಕಾರದ ವಿರುದ್ದ ಬಿಜೆಪಿ ಯುವಮೋರ್ಚಾ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ವಿರೋಧ ವ್ಯಕ್ತಪಡಿಸಿರುವ ಯುವಮೋರ್ಚಾ ಪದಾಧಿಕಾರಿಗಳು ದೇಶದ ಪ್ರಧಾನಿಗೆ ಈ ರೀತಿಯಾದ ಅಡೆ ತಡೆ ಉಂಟುಮಾಡಿರುವುದು ಪಂಜಾಬ್ ಸರ್ಕಾರದ ವೈಫಲ್ಯವಾಗಿದೆ. ಪ್ರಧಾನಿಗಳು ತೆರಳುವ ಮುನ್ನ ಕ್ಲಿಯರೆನ್ಸ್ ನೀಡುವುದು ಸರ್ಕಾರದ ಹೊಣೆಯಾಗಿರುತ್ತದೆ ಆದರೆ ಸುಳ್ಳು ಮಾಹಿತಿ ನೀಡಿರುವುದು ಅನುಮಾನ ವ್ಯಕ್ತಪಡಿಸುತ್ತದೆ, ಈ ರೀತಿಯಾಗಿ ದೇಶದ ಪ್ರಧಾನ ಮಂತ್ರಿಯವರನ್ನು ನಡೆಸಿಕೊಳ್ಳುವುದು ದೇಶದ ಹಿತಕ್ಕೆ ಮಾರಕವಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಶ್ರೇಯಸ್ ಕವಿಲುಕುಡಿಗೆ ಹೇಳಿಕೆ ನೀಡಿದರು.

ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿಗಳಿಗೆ ಭದ್ರತೆಯ ದೃಷ್ಟಿಯಲ್ಲಿ ಈ ರೀತಿಯಾದ ಕೊರತೆಯಾಗಿರುವುದು ಅತೀ ದೊಡ್ಡ ವೈಫಲ್ಯವಾಗಿದೆ. ದೇಶದ ಆಂತರಿಕ ಭದ್ರತೆಗೆ ಯಾವುದೇ ಲೋಪ ಉಂಟಾಗದಂತೆ ಉನ್ನತ ದರ್ಜೆಯಲ್ಲಿರುವವರು ವ್ಯವಹರಿಸಬೇಕು. ಈ ಕೂಡಲೇ ಪಂಜಾಬ್ ನಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಶ್ರೇಯಸ್ ಕವಿಲುಕುಡಿಗೆ, ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷರಾದ ಸುನೀಲ್ ಸಂಪೆಕೊಳಲು, ಕಾರ್ಯದರ್ಶಿಗಳಾದ ಸಚಿನ್ ಗುಬ್ಬಗೋಡು ಹಾಗೂ ಇನ್ನಿತರ ಯುವಮೋರ್ಚಾ ಪದಾಧಿಕಾರಿಗಳು ಇದ್ದರು.