ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ತಹಸೀಲ್ದಾರ್ ವಾಹನದ ಚಾಲಕ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದು ಆತನ ಸಾವಿಗೆ ನ್ಯಾಯ ದೊರೆಯಬೇಕು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಸಂಬಂಧಿಕರು ಹಾಗೂ ಶೃಂಗೇರಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಭ್ರಷ್ಟ ಅಧಿಕಾರಿಗಳ ಕೈವಾಡದಿಂದಾಗಿ ಅಮಾಯಕ ಯುವಕನ ಬಲಿಯಾಗಿದೆ ಇದು ಸಹಿಸಲಾರದ ನೋವಾಗಿದೆ ತಪ್ಪಿತಸ್ಥರಿಗೆ ಈ ಕೂಡಲೇ ಶಿಕ್ಷೆಯಾಗಬೇಕು ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಿದ್ದ ಯುವಕನ ಸಾವಿನ ಹಿಂದಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ ಪ್ರಕರಣ, ತನಿಖೆಗೆ ಒತ್ತಾಯ ಆಸ್ಪತ್ರೆ ಬಳಿ ಪ್ರತಿಭಟನೆ.

ಸ್ಥಳಕ್ಕೆ ಆಗಮಿಸಿದ ಎ.ಸಿ ನಾಗರಾಜ್ ಅವರನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಾವು ಅನ್ಯಾಯದ ಸಾವು ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ ಎಂದು ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕು ಹಾಗೂ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ನೆರೆದವರು ಆಗ್ರಹಿಸಿದ್ದಾರೆ. 

ಮರಣೋತ್ತರ ಪರೀಕ್ಷೆಯ ನಂತರದಲ್ಲಿ ಚಾಲಕ ವಿಜೇತ್ ಅವರ ಮೃತ ದೇಹವನ್ನು ಶೃಂಗೇರಿಯ ತಾಲೂಕು ಕಛೇರಿಯ ಮುಂಭಾಗದಲ್ಲಿರಿಸಿ ಧರಣಿ ನಡೆಸುವುದಾಗಿ ಸಾರ್ವಜನಿಕರು ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ. ಅಮಾಯಕನ ಜೀವಹೋಗಿದೆ ಬೇರೆ ಯಾರ ಮನೆಯಲ್ಲೂ ಈ ರೀತಿಯ ಘಟನೆಗಳು ಮರುಕಳಿಸಬಾರದು ಆದ ಕಾರಣ ತಪ್ಪಿತಸ್ಥರಿಗೆ ಶಿಕ್ಷೆ ಅಗತ್ಯ ಎಂದು ಕುಟುಂಬಸ್ಥರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.