ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕು ಕಛೇರಿಯಲ್ಲಿ ಹಕ್ಕು ಪತ್ರದ ಕುರಿತಾದ ವಿಚಾರ ಸಿನಿಮಾ ಶೈಲಿಯಲ್ಲಿ ದಿನಕ್ಕೊಂದು ಹೊಸ ರೂಪಗಳನ್ನು ತಾಳುತ್ತಿದೆ. ದಿನ ಹೋದಂತೆ ಹೊಸ ಹೊಸ ಗೊಂದಲಗಳು ತಲೆದೋರುತ್ತಲಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಛೇರಿಯ ತಹಸೀಲ್ದಾರರ ಕೊಠಡಿಯ ತಿಜೋರಿಯನ್ನು ಯಾರೋ ತೆರೆದಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಶೃಂಗೇರಿ ಪೊಲೀಸ್ ಠಾಣೆಗೆ ಈಗಿನ ತಹಸೀಲ್ದಾರ್ ಬಸವರಾಜ ಅವರು ದೂರು ನೀಡಿದ್ದಾರೆ.

ಈ ಕುರಿತಾಗಿ ತಾಲೂಕು ಕಛೇರಿಯ ಸಿಬ್ಬಂದಿಯೋರ್ವರು ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದ, ಕರ್ತವ್ಯದ ಮೇಲೆ ಕಛೇರಿಯಿಂದ ಹೊರಗಿದ್ದ ತಹಸೀಲ್ದಾರ್ ಬಸವರಾಜ ಅವರಿಗೆ ಮಾಹಿತಿ ನೀಡಿರುವುದಾಗಿ ಅವರ ಮಾಹಿತಿಯನ್ನು ಪಡೆದ ನಂತರ ತಕ್ಷಣ ಕಛೇರಿಗೆ ತೆರಳಿ ನೋಡಿದಾಗ ಲಾಕರ್ ತೆರೆದಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಮಲೆನಾಡಿನಲ್ಲಿ ಮತ್ತೆ ಆರಂಭವಾದ ಮಂಗನ ಕಾಯಿಲೆ ರೋಗ ; ಒಂದೇ ವಾರದಲ್ಲಿ ಎರಡು ಪ್ರಕರಣ ಧೃಢ

ಆದರೆ ತಿಜೋರಿ ಕೀಲಿಕೈ ಹಿಂದಿನ ತಹಶೀಲ್ದಾರ್ ಅಂಬುಜಾ ಬಳಿಯಿದ್ದು, ಅದನ್ನು ಇನ್ನೂ ಹಸ್ತಾಂತರ ಮಾಡಿರಲಿಲ್ಲ. ಆದಕಾರಣ ನಕಲಿ ಕೀ ಬಳಸಿ ಓಪನ್ ಮಾಡಿರುವ ಸಾಧ್ಯತೆಯಿದೆ. ಇನ್ನು ಈ ಕೆಲಸವನ್ನು ಕಛೇರಿ ಒಳಗಿನವರೇ ಮಾಡಿರುವ ಸಾಧ್ಯತೆ ಹೆಚ್ಚಿರುವ ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ ಸಂಜೆ 6.30ರ ವೇಳೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಹಾಗೂ ತಾಲೂಕು ಕಛೇರಿಯಲ್ಲಿ ಸಿಸಿಟಿವಿ ಕ್ಯಾಮರಾ ರೆಕಾರ್ಡ್ ಆಗುತ್ತಿಲ್ಲ ಎಂಬ ಮಾಹಿತಿ ತಿಳಿದವರೇ ಈ ಕೆಲಸವನ್ನು ಮಾಡಿದ್ದಾರೆ.

ಹಕ್ಕುಪತ್ರ ಪ್ರಕರಣವು ದಿನ ಕಳೆದಂತೆ ಒಂದಿಲ್ಲೊಂದು ಗೊಂದಲಗಳಿಗೆ ಸಾಕ್ಷಿಯಾಗುತ್ತಿದೆ. ಸಂಪೂರ್ಣ ತನಿಖೆಯ ನಂತರವಷ್ಟೇ ತಿಜೋರಿ ತೆರೆದ ಚಾಲಾಕಿಗಳು ಯಾರು ಎಂದು ತಿಳಿಯಬೇಕಿದೆ. ಆದರೆ ಈ ವ್ಯವಸ್ಥೆ ಒಳಗೆ ಆ ಆಶಾವಾದವೂ ಸುಳ್ಳಾಗುವ ಸಾಧ್ಯತೆ ಹೆಚ್ಚಿದೆ.